ಮಂಡ್ಯ.ಜ.26 :- ಮಂಡ್ಯ ಜಿಲ್ಲೆಗೆ ಮುಕುಟದಂತಿರುವ ಮೈಸೂರು ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಮತ್ತು ಅಭಿವೃದ್ಧಿಗೆ ಸರ್ಕಾರ ಬದ್ದವಾಗಿದ್ದು, ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ರೂ 50 ಕೋಟಿ ಅನುದಾನ ನೀಡಿದೆ. ಜಿಲ್ಲೆಯ ರೈತರ ಮತ್ತು ಜನಪ್ರತಿನಿಧಿಗಳ ಸಹಕಾರದಿಂದ 2.41 ಲಕ್ಷ ಮೆಟ್ರಿಕ್ಟನ್ ಕಬ್ಬನ್ನು ನುರಿಸಿ ಈಗಾಗಲೇ 1.68 ಲಕ್ಷ ಕ್ವಿಂಟಾಲ್ ಸಕ್ಕರೆಯನ್ನು ಉತ್ಪಾದಿಸಲಾಗಿರುತ್ತದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.
ಅವರು ಇಂದು ಮಂಡ್ಯ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ 75ನೇ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ ಧ್ವಾಜಾರೋಹಣ ನೆರವೇರಿಸಿ ಮಾತನಾಡಿದರು.
ನಮ್ಮ ದೇಶವನ್ನು ಬ್ರಿಟಿಷರ ಕಪಿಮುಷ್ಠಿಯಿಂದ 1947 ಆಗಸ್ಟ್ 15 ರಂದು ಮುಕ್ತಿಗೊಳಿಸಿದರೂ ಸಹಾ ಭಾರತೀಯರೆಲ್ಲರಿಗೂ ನಮ್ಮದೇ ಆದ ಆಡಳಿತ ವ್ಯವಸ್ಥೆ ಮತ್ತು ಸಂವಿಧಾನ ಇರಲಿಲ್ಲ. ನಮ್ಮದೇ ಆದ ಭೌಗೋಳಿಕ ವ್ಯವಸ್ಥೆಗೆ ಸಂವಿಧಾನದ ಅಗತ್ಯತೆಯನ್ನು ಮನಗಂಡು ನಮ್ಮ ದೇಶಕ್ಕೆ ವಿಶ್ವದಲ್ಲಿಯೇ ಅತಿದೊಡ್ಡ ಸಂವಿಧಾನವನ್ನು ಜಾರಿಗೊಳಿಸಿದ ದಿನವಾದ ಜನವರಿ 26 ರಂದು ಗಣರಾಜ್ಯೋತ್ಸವ ದಿನವನ್ನಾಗಿ ಭಾರತೀಯರಾದ ನಾವೆಲ್ಲರೂ ಹೆಮ್ಮೆಯಿಂದ ಆಚರಿಸುತ್ತೀದ್ದೇವೆ ಎಂದರು.
ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದು, ರಾಷ್ಟ್ರದ ಸಾರ್ವಭೌಮತೆಯನ್ನು ಗೌರವಿಸಿ, ಅದನ್ನು ಎತ್ತಿಹಿಡಿಯುತ್ತೇವೆ. ನಮ್ಮದೇ-ದೇಶ, ನಮ್ಮದೇ-ಸಂವಿಧಾನ, ನಮ್ಮದೇ-ಆಡಳಿತ, ನಾವು ಸ್ವತಂತ್ರರಾಗಿ ಬದುಕುತ್ತೇವೆ ಎನ್ನುವ ಶಪಥವನ್ನು ಕೈಗೊಂಡ ದಿನವೇ ಗಣರಾಜ್ಯ ದಿನ. ಈ ದಿನ ಸಮಸ್ತ ಭಾರತೀಯರಿಗೆ ನಮಗೆ ಅತ್ಯಂತ ಪವಿತ್ರ ದಿನವಾಗಿದೆ ಎಂದು ಹೇಳಿದರು.
ಭಾರತೀಯರಾದ ನಾವೆಲ್ಲರೂ ಸಂವಿಧಾನದ ಮಹತ್ವವನ್ನು ಅರಿತುಕೊಳ್ಳಬೇಕಿದೆ. ಸಂವಿಧಾನದ ಮಹತ್ವ ಮತು ಅದರ ಪ್ರಾಮುಖ್ಯತೆಯನ್ನು ತಿಳಿಸುವ ಕುರಿತು ನಮ್ಮ ಸರ್ಕಾರ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಗಣರಾಜ್ಯ ದಿನದಂದೇ ರಾಜ್ಯಾದ್ಯಂತ ಚಾಲನೆ ನೀಡಲಾಗುತ್ತಿದೆ. ಇದೇ ರೀತಿ ನಮ್ಮ ಜಿಲ್ಲೆಯಲ್ಲಿಯೂ ಸಹ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದ್ದು, ಇಂದಿನಿಂದ ಫೆಬ್ರವರಿ 23 ರವರೆಗೆ ಜಿಲ್ಲೆಯ 233 ಗ್ರಾಮ ಪಂಚಾಯಿತಿಗಳಲ್ಲಿಯೂ ರಥ ಸಂಚರಿಸಲಿದೆ ಎಂದರು.
ಸರ್ಕಾರದ ಮೂಲ ಧ್ಯೇಯ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಅದರಲ್ಲೂ ಜನ ಸಾಮಾನ್ಯರ ಮತ್ತು ಹಿಂದುಳಿದ ವರ್ಗದವರ ಕನಿಷ್ಟ ಅವಶ್ಯಕತೆಗಳನ್ನು ಪೂರೈಸುವ ಆಶಯವನ್ನು ನಮ್ಮ ಸರ್ಕಾರ ಹೊಂದಿದೆ. ಅರ್ಥಿಕ ಸಬಲೀಕರಣ, ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯ ಮತ್ತು ಸಮಾನತೆ ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅದರಲ್ಲಿ ಮಹತ್ವಾಕಾಂಕ್ಷೆ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂಬ ಹೆಗ್ಗಳಿಕೆ ನಮ್ಮ ಸರ್ಕಾರಕ್ಕಿದೆ ಎಂದರು.
ಜಿಲ್ಲೆಯಲ್ಲಿ ಡಿಸೆಂಬರ್-2023 ರವರೆಗೆ ಒಟ್ಟು 3.58 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಮೂಲಕ ಶಕ್ತಿ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡಿರುತ್ತಾರೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 5 ಕೆ.ಜಿ ಅಕ್ಕಿಯನ್ನು ದಾಸ್ತಾನು ರೂಪದಲ್ಲಿ ಹಾಗೂ 5 ಕೆ.ಜಿ ಅಕ್ಕಿಯನ್ನು ನಗದು ರೂಪದಲ್ಲಿ ನೀಡಲಾಗುತ್ತಿದ್ದು, ಡಿಸೆಂಬರ್-2023 ರ ಅಂತ್ಯಕ್ಕೆ ಒಟ್ಟು 4,36,510 ಫಲಾನುಭವಿಗಳಿಗೆ ರೂ 137.50 ಕೋಟಿ ಹಣವನ್ನು ಡಿಬಿಟಿ ಮೂಲಕ ಪಾವತಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 4,64,303 ಗ್ರಾಹಕರು ಹೆಸರು ನೋಂದಣಿ ಮಾಡಿಸಿಕೊಂಡಿದ್ದು, ಡಿಸೆಂಬರ್-2023ರ ಅಂತ್ಯಕ್ಕೆ 8.90 ಕೋಟಿ ಯೂನಿಟ್ಸ್ ವಿದ್ಯುತ್ನ್ನು ಗ್ರಾಹಕರಿಗೆ ಉಚಿತವಾಗಿ ಒದಗಿಸಿ ರೂ. 76.22 ಕೋಟಿಗಳನ್ನು ಪಾವತಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ಲ್ಲೆಯಲ್ಲಿ ಡಿಸೆಂಬರ್-2023 ರ ಅಂತ್ಯಕ್ಕೆ 4,35,820 ಮಹಿಳೆಯರಿಗೆ ತಲಾ ರೂ 2,000/-ಗಳಂತೆ ಒಟ್ಟು 89.17 ಕೋಟಿಗಳನ್ನು ಪಾವತಿಸಲಾಗಿದೆ. ಯುವನಿಧಿ ಯೋಜನೆಯಡಿ 2023 ನೇ ಸಾಲಿನಲ್ಲಿ ಉತ್ತೀರ್ಣರಾಗಿ 180 ದಿನಗಳು ಕಳೆದರೂ ಉದ್ಯೋಗ ಸಿಗದ ಡಿಪ್ಲೋಮೋ ಹಾಗೂ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಕ್ರಮವಾಗಿ ರೂ 1,500/- ಮತ್ತು 3,000/ ಗಳನ್ನು ನಿರುದ್ಯೋಗ ಭತ್ಯೆಯನ್ನು ಗರಿಷ್ಟ 2 ವರ್ಷಗಳ ಅವಧಿಯವರೆಗೆ ನೀಡಲಾಗುವುದು. ಜಿಲ್ಲೆಯಲ್ಲಿ ಈವರೆಗೆ 2,053 ಅರ್ಜಿಗಳು ನೋಂದಣಿಯಾಗಿರುತ್ತವೆ ಎಂದು ಮಾಹಿತಿ ನೀಡಿದರು.
ತಹಶೀಲ್ದಾರ್, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 4,600 ಕ್ಕೂ ಹೆಚ್ಚು ಕಂದಾಯ ನ್ಯಾಯಾಲಯ ಪ್ರಕರಣಗಳನ್ನು ಕಳೆದ 6 ತಿಂಗಳುಗಳಲ್ಲಿ ವಿಲೇವಾರಿ ಮಾಡುವ ಮೂಲಕ ಮಂಡ್ಯ ಜಿಲ್ಲೆಯು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದರು.
ಮೃತ ಪಟ್ಟ ವ್ಯಕ್ತಿಯ ವಾರಸುದಾರರು, ವಾರಸು ನೆಲೆಯಲ್ಲಿ ಹಕ್ಕು ಬದಲಾವಣೆಗಾಗಿ ತಾಲ್ಲೂಕು ಕಛೇರಿಗೆ ಅಲೆಯುವುದನ್ನು ತಪ್ಪಿಸಲು ನಮ್ಮ ಸರ್ಕಾರ ಜಾರಿಗೆ ಬಂದ ನಂತರ ಜಿಲ್ಲಾಧಿಕಾರಿಗಳ ವಿಶೇಷ ಆಸಕ್ತಿಯಿಂದ ಪೌತಿ ಖಾತಾ ಆಂದೋಲನವನ್ನು ಹಮ್ಮಿಕೊಂಡು ಕಳೆದ 6 ತಿಂಗಳಲ್ಲಿ ಒಟ್ಟು 150 ಕ್ಕೂ ಹೆಚ್ಚು ಪೌತಿ ಖಾತೆ ಆಂದೋಲನಗಳನ್ನು ನಡೆಸುವ ಮೂಲಕ 7 ಸಾವಿರಕ್ಕೂ ಹೆಚ್ಚು ಪೌತಿ ಖಾತೆಗಳನ್ನು ಮಾಡಲಾಗಿದೆ. ಕಳೆದ 6 ತಿಂಗಳುಗಳಿಂದ 12 ಸಾವಿರಕ್ಕೂ ಹೆಚ್ಚು ಆರ್.ಟಿ.ಸಿ ತಿದ್ದುಪಡಿಗಳನ್ನು ಮಾಡಲಾಗಿದೆ. ಕಂದಾಯ ದಾಖಲೆಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಕಂದಾಯ ಭೂ ದಾಖಲೆಗಳ ಆಧುನೀಕರಣಕ್ಕಾಗಿ ಪೈಲಟ್ ಆಧಾರದಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿ ರೂ 35 ಲಕ್ಷಗಳ ವೆಚ್ಚದಲ್ಲಿ ಭೂ ದಾಖಲೆಗಳ ಗಣಕೀಕರಣ ಮಾಡಲು ಯೋಜನೆ ರೂಪಿಸಲಾಗಿದೆ. ಉಳಿದ ತಾಲ್ಲೂಕುಗಳಲ್ಲಿಯೂ ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಮಳೆಯ ಕೊರತೆಯಿಂದಾಗಿ ಉಂಟಾದ ಬೆಳೆ ನಷ್ಟಕ್ಕೆ ಪರಿಹಾರ ನೀಡುವ ಸಲುವಾಗಿ ರೂ ಗರಿಷ್ಠ 2,000 ರವರೆಗೆ ಪರಿಹಾರ ವಿತರಿಸಲಾಗುತ್ತಿದ್ದು, ಈವರೆಗೆ ಜಿಲ್ಲೆಯ 74,489 ರೈತರಿಗೆ ರೂ 28.89 ಕೋಟಿ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲು ಕ್ರಮವಹಿಸಲಾಗಿದೆ. ಬರ ಪರಿಸ್ಥಿತಿಯ ತುರ್ತು ಕ್ರಮಗಳನ್ನು ನಿರ್ವಹಿಸಲು ನಮ್ಮ ಸರ್ಕಾರದಿಂದ ಈಗಾಗಲೇ 10.50 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಲಾಗಿರುತ್ತದೆ ಎಂದರು.
ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲೆಯ 233 ಗ್ರಾಮ ಪಂಚಾಯಿತಿಗಳಲ್ಲಿ ಇ-ಸ್ವತ್ತು ಅಭಿಯಾನವನ್ನು ಕೈಗೊಳ್ಳಲಾಗಿದ್ದು, ಮನೆ ಮತ್ತು ನಿವೇಶನದ ಮಾಲೀಕರಿಗೆ ಇ-ಸ್ವತ್ತು ತಂತ್ರಾಂಶದಲ್ಲಿ 8,663 ಇ-ಸ್ವತ್ತು ದಾಖಲೆಗಳನ್ನು ವಿಶೇಷ ಆಂದೋಲನದ ಮೂಲಕ ನೀಡಲಾಗಿದೆ ಎಂದರು.
ನಮ್ಮ ನಡಿಗೆ ಪರಂಪರೆಯ ಕಡೆಗೆ ಎಂಬ ಅಭಿಯಾನ ಮೂಲಕ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಲು 151 ಸ್ಮಾರಕಗಳನ್ನು ಸಂರಕ್ಷಿಸಲಾಗಿರುತ್ತದೆ. ವಿ.ಸಿ. ನಾಲೆ ಎರಡನೇ ಹಂತದ ಆಧುನೀಕರಣ ಪ್ಯಾಕೇಜ್-1 ಕಾಮಗಾರಿಯನ್ನು ಅಂದಾಜು ಮೊತ್ತ ರೂ. 360 ಕೋಟಿಗಳಲ್ಲಿ ತೆಗೆದುಕೊಳ್ಳಲಾಗಿದೆ. ಮುಖ್ಯ ನಾಲೆಯ ಸರಪಳಿಯಿಂದ 46.25 ಕಿ.ಮೀ.ವರೆಗೆ ಆಧುನೀಕರಣಗೊಳಿಸಲು ಉದ್ದೇಶಿಸಲಾಗಿರುತ್ತದೆ. ಪೂರಿಗಾಲಿ ಸೂಕ್ಷ್ಮ ನೀರಾವರಿ ಯೋಜನೆಯಡಿ ರೂ. 593 ಕೋಟಿಗಳಲ್ಲಿ ಮಳವಳ್ಳಿ ತಾಲ್ಲೂಕಿನ 51 ಗ್ರಾಮಗಳ 25000 ಎಕರೆ ಪ್ರದೇಶಕ್ಕೆ ಹನಿ ನೀರನ್ನು ಒದಗಿಸಲು ಹಾಗೂ 16 ಕೆರೆಗಳನ್ನು ತುಂಬಿಸಲು ಯೋಜನೆಯನ್ನು ರೂಪಿಸಲಾಗಿದೆ.
ಕೆಮ್ಮಣ್ಣುನಾಲೆ, ತುರಗನೂರು ನಾಲೆ, ಹೆಬ್ಬಕವಾಡಿ ಮತ್ತು ಸಂಪರ್ಕ ನಾಲೆಗಳ ಆಧುನೀಕರಣ ಕಾಮಗಾರಿಗಳನ್ನು ರೂ.375 ಕೋಟಿಗಳ ವೆಚ್ಚದಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಉದ್ದೇಶಿಸಲಾಗಿರುತ್ತದೆ ಎಂದು ಹೇಳಿದರು.
ಮಳೆಯ ಅನಿಶ್ಚಿತತೆಯಿಂದ ಮಳೆ ಆಶ್ರಿತ ಪ್ರದೇಶಗಳಲ್ಲಿ ಸುಸ್ಥಿರ ಕೃಷಿಗೆ ಒತ್ತು ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ರಾಜ್ಯಾದ್ಯಂತ ಕೃಷಿ ಭಾಗ್ಯ ಯೋಜನೆಯನ್ನು 200 ಕೋಟಿ ರೂ ವೆಚ್ಚದಲ್ಲಿ ಮರುಜಾರಿಗೊಳಿಸಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಅನುಷ್ಟಾನಗೊಳಿಸಲು ರೂ 653.8 ಲಕ್ಷ ಅನುದಾನವನ್ನು ಮೀಸಲಿಡಲಾಗಿದೆ ಎಂದರು.
ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಅಭಿವೃದ್ದಿ ಮತ್ತು ನಿರ್ವಹಣೆಗಾಗಿ ಪ್ರತಿಷ್ಟಾನ ರಚನೆ, ಮೇಲುಕೋಟೆ ಅಭಿವೃದ್ದಿ ಪ್ರಾಧಿಕಾರ ರಚನೆ ಮತ್ತು ಮಂಡ್ಯ ನಗರದ ಕಲಾಮಂದಿರ ನವೀಕರಣ ಸಂಬಂಧ ಕ್ರಮ ವಹಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್, ಜಿಲ್ಲಾಧಿಕಾರಿ ಡಾ: ಕುಮಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಗಣರಾಜ್ಯೋತ್ಸವದಲ್ಲಿ 24 ತಂಡಗಳಿಂದ ಪಥಸಂಚಲನ
ಗಣರಾಜ್ಯೋತ್ಸವದ ಅಂಗವಾಗಿ ಇಂದು ನಡೆದ ಪಥಸಂಚಲನದಲ್ಲಿ ಜಿಲ್ಲಾ ಶಸಸ್ತ್ರ ಮೀಸಲು ಪಡೆ, ಜಿಲ್ಲಾ ನಾಗರೀಕ ಪೊಲೀಸ್ ಪಡೆ, ಗೃಹ ರಕ್ಷಕ ದಳ, ಅಬಕಾರಿ ದಳ, ಲಕ್ಷ್ಮೀ ಜನಾರ್ಧನ ಶಾಲೆ, ಅನಿಕೇತನ ಪ್ರೌಢಶಾಲೆ, ಲಕ್ಷ್ಮೀ ಜನಾರ್ಧನ ಶಾಲೆ, ಕಾರ್ಮೆಲ್ ಕಾನ್ವೆಂಟ್, ಆದರ್ಶ ಪ್ರೌಢಶಾಲೆ, ಪಿ. ಇ. ಎಸ್. ಪ್ರೌಢಶಾಲೆ, ಸದ್ವಿದ್ಯ ಪ್ರೌಢಶಾಲೆ, ಪಿ.ಇ.ಎಸ್ ಮಹಿಳಾ ಕಾಲೇಜು, ಸೇಂಟ್ ಜೋಸೆಫ್ ಪ್ರೌಢಶಾಲೆ, ಕರ್ನಾಟಕ ಪಬ್ಲಿಕ್ ಸ್ಕೂಲ್, ರೋಟರಿ ಪ್ರೌಢಶಾಲೆ, ಅಭಿನವ ಭಾರತಿ ಹಿರಿಯ ಪ್ರಾಥಮಿಕ ಶಾಲೆ, ಸೆಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ತಂಡ ಸೇರಿದಂತೆ 24 ತಂಡಗಳು ಭಾಗವಹಿಸಿದ್ದವು.