IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ 17ನೇ ಆವೃತ್ತಿ ಆರಂಭಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಮಾರ್ಚ್ 22 ರಿಂದ ರಂಗು ರಂಗಿನ ಕ್ರಿಕೆಟ್ ಟೂರ್ನಿ ಐಪಿಲೆ್ ಶುರುವಾಗಲಿದ್ದು, ಫೈನಲ್ ಪಂದ್ಯವು ಮೇ ಕೊನೆಯ ವಾರದಲ್ಲಿ ನಡೆಯುವ ಸಾಧ್ಯತೆಯಿದೆ. ಇನ್ನು ಮೊದಲ ಪಂದ್ಯಕ್ಕೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಆತಿಥ್ಯವಹಿಸಲಿದೆ.
ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2024 ರ (IPL 2024) ಪ್ರಾರಂಭಿಕ ದಿನಾಂಕ ಖಚಿತವಾಗಿದೆ. ಮಾರ್ಚ್ 22 ರಿಂದ ಐಪಿಎಲ್ ಸೀಸನ್-17 ಶುರುವಾಗಲಿದ್ದು, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಧುಮಾಳ್ ತಿಳಿಸಿದ್ದಾರೆ.
ಮಾರ್ಚ್ 22 ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಗುಜರಾತ್ ಟೈಟಾನ್ಸ್ (GT) ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಮೊದಲ ಹಂತದಲ್ಲಿ 15 ದಿನಗಳವರೆಗಿನ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲು ಬಿಸಿಸಿಐ ನಿರ್ಧರಿಸಿದೆ.
ಇದಕ್ಕೆ ಮುಖ್ಯ ಕಾರಣ ಮುಂಬರುವ ಲೋಕಸಭಾ ಚುನಾವಣೆ. ಈ ಬಾರಿಯ ಐಪಿಎಲ್ ಮತ್ತು ಲೋಕಸಭಾ ಚುನಾವಣೆ ಏಕಕಾಲಕ್ಕೆ ನಡೆಯುವುದರಿಂದ ಸುರಕ್ಷತಾ ಸಮಸ್ಯೆಗಳು ತಲೆದೂರುವ ಸಾಧ್ಯತೆಯಿದೆ. ಹೀಗಾಗಿ ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಉಳಿದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಿದೆ.
ಇದಾಗ್ಯೂ ಸಂಪೂರ್ಣ ಟೂರ್ನಿಯು ಭಾರತದಲ್ಲೇ ನಡೆಯಲಿದೆ ಎಂದು ಅರುಣ್ ಧುಮಾಳ್ ಖಚಿತಪಡಿಸಿದ್ದಾರೆ. ಇದಕ್ಕೂ ಮುನ್ನ ಚುನಾವಣಾ ನಿಮಿತ್ತ ಐಪಿಎಲ್ ಅನ್ನು ಎರಡು ದೇಶಗಳಲ್ಲಿ ಆಯೋಜಿಸಲಾಗುತ್ತದೆ ಎನ್ಲಲಾಗಿತ್ತು. ಆದರೀಗ ಸಾರ್ವತ್ರಿಕ ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಐಪಿಎಲ್ ದಿನಾಂಕಗಳನ್ನು ನಿಗದಿ ಮಾಡಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ.
2014ರಲ್ಲಿ ಲೋಕಸಭಾ ಚುನಾವಣಾ ನಿಮಿತ್ತ ಐಪಿಎಲ್ನ 20 ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸಲಾಗಿತ್ತು. ಇದಕ್ಕೂ ಮುನ್ನ 2009 ರ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಸಂಪೂರ್ಣ ಟೂರ್ನಿಯನ್ನು ಸೌತ್ ಆಫ್ರಿಕಾದಲ್ಲಿ ನಡೆಸಲಾಗಿತ್ತು. ಇದೀಗ ಮತ್ತೊಮ್ಮೆ ಚುನಾವಣಾ ಸಂದರ್ಭದಲ್ಲೇ ಐಪಿಎಲ್ ನಡೆಯುತ್ತಿದ್ದರೂ ಟೂರ್ನಿಯನ್ನು ವಿದೇಶಕ್ಕೆ ಶಿಫ್ಟ್ ಮಾಡುವುದಿಲ್ಲ ಎಂದು ಬಿಸಿಸಿಐ ಖಚಿತಪಡಿಸಿದೆ.
ಅದರಂತೆ ಮಾರ್ಚ್ 22 ರಿಂದ ಐಪಿಎಲ್ ಸೀಸನ್-17 ಶುರುವಾಗಲಿದ್ದು, ಮೇ 26 ರಂದು ಫೈನಲ್ ಪಂದ್ಯ ನಡೆಯುವ ಸಾಧ್ಯತೆಯಿದೆ. ಏಕೆಂದರೆ ಜೂನ್ 1 ರಿಂದ ಟಿ20 ವಿಶ್ವಕಪ್ ಆರಂಭವಾಗಲಿದ್ದು, ಅದಕ್ಕೂ ಮುನ್ನ ಐಪಿಎಲ್ ಟೂರ್ನಿಯನ್ನು ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಬಿಸಿಸಿಐ ಮುಂದಿದೆ.