ಮುಜಫರ್ನಗರ, ಜ.೨೦: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಇನ್ನು ಎರಡು ದಿನ ಮಾತ್ರ ಬಾಕಿದೆ. ಈಗಾಗಲೇ ರಾಮಭಕ್ತರಲ್ಲಿ ಸಂಭ್ರಮ ಮನೆ ಮಾಡಿದೆ. ರಾಮಮಂದಿರಕ್ಕೆ ಅನೇಕ ಭಕ್ತರು, ಹಲವು ಉಡುಗೊರೆಯನ್ನು ನೀಡುವ ಮೂಲಕ ರಾಮ ಭಕ್ತಿಯನ್ನು ತೋರಿಸಿದ್ದಾರೆ. ಇದೀಗ ಇಂತಹದೇ ಒಂದು ಕೊಡುಗೆಯನ್ನು ರಾಮಮಂದಿರಕ್ಕೆ ಭಕ್ತರೊಬ್ಬರು ನೀಡಿದ್ದಾರೆ. ಬೃಹತ್ ಆಕಾರದ ಬೀಗವೊಂದನ್ನು ಅಯೋಧ್ಯೆಗೆ ನೀಡಿದ್ದಾರೆ. ಇದಕ್ಕಾಗಿ ಎರಡು ವರ್ಷಗಳ ಕಾಲ ಇವರು ಶ್ರಮಿಸಿದ್ದಾರೆ ಎಂದು ಹೇಳಲಾಗಿದೆ. ಅಲಿಘರ್ನ ಕುಶಲಕರ್ಮಿ ಸತ್ಯ ಪ್ರಕಾಶ್ (೬೭ ) ಅವರು ಅಯೋಧ್ಯೆಯ ದೇವಾಲಯಕ್ಕಾಗಿ ೪೦೦ ಕೆಜಿಯ ದೈತ್ಯ ಬೀಗವನ್ನು ನೀಡಿದ್ದಾರೆ. ಈ ಬೀಗಕ್ಕೆ ಕೊನೆಯ ಸ್ವರ್ಶ ನೀಡುವ ಮುನ್ನವೇ ಅವರು ಕೊನೆಯುಸಿರು ಎಳೆದಿದ್ದಾರೆ. ಇದೀಗ ಅವರ ಆಸೆಯಂತೆ ೧೫ ಕೆಜಿ ತೂಕದ ಎರಡು ಕೀಗಳ ಜೊತೆಗೆ ೪೦೦ ಕೆಜಿಯ ದೈತ್ಯ ಬೀಗವು ಅಯೋಧ್ಯೆ ತಲುಪಿದೆ.
ಈ ಬೀಗ ೧೦ ಅಡಿ ಎತ್ತರ, ೪.೬ ಅಡಿ ಅಗಲ ಮತ್ತು ೯.೫ ಇಂಚು ದಪ್ಪದ ಸುಮಾರು ೨ ಲಕ್ಷ ರೂ, ಖರ್ಚು ಮಾಡಲಾಗಿದೆ. ಕೊನೆಗೂ ನನ್ನ ಪತಿಯ ಆಸೆಯಂತೆ ಅಯೋಧ್ಯೆ ರಾಮಮಂದಿರಕ್ಕೆ ಈ ಕೊಡುಗೆ ತಲುಪಿದೆ ಎಂಬ ಸಂತೋಷ ನಮಗಿದೆ ಎಂದು ಸತ್ಯ ಪ್ರಕಾಶ್ ಅವರು ಪತ್ನಿ ರುಕ್ಮಣಿ ಹೇಳಿದ್ದಾರೆ. ಸತ್ಯ ಪ್ರಕಾಶ್ ಅವರ ಮನೆಯಿಂದ ಈ ದೈತ್ಯ ಬೀಗವನ್ನು ಕ್ರೇನ್ ಸಹಾಯದಿಂದ ಲಾರಿಗೆ ತುಂಬಿ, ಶುಕ್ರವಾರ ಅಯೋಧ್ಯೆಗೆ ಈ ಬೀಗ ತಲುಪಿದೆ ಎಂದು ಹೇಳಿದ್ದಾರೆ. ಇನ್ನು ಸತ್ಯ ಪ್ರಕಾಶ್ ಅವರ ಪುತ್ರ ಮಹೇಶ್ಚಂದ್ ಅವರು ತನ್ನ ಕುಟುಂಬದ ಸಂಕಷ್ಟದ ಬಗ್ಗೆ ತಿಳಿದ ಹಿಂದೂ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಅನ್ನಪೂರ್ಣ ಭಾರತಿ ಅವರ ನಮಗೆ ಸಹಾಯ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಈ ಬೀಗ ವಿಶ್ವದಲ್ಲೇ ಅತೀ ದೊಡ್ಡದಾದ ಬೀಗ ಎಂದು ಹೇಳಲಾಗಿದೆ. ಜತೆಗೆ ಸ್ವತಃ ಕೈಯಲ್ಲಿಯೇ ತಯಾರಿಸಿರುವ ಬೀಗ ಎಂದು ಹೇಳಲಾಗಿದೆ. ಇನ್ನು ಸತ್ಯ ಪ್ರಕಾಶ್ ಅವರು ಕನಸು ಇಂದು ಪೂರ್ಣಗೊಂಡಿದೆ ಎಂದು ಹಿಂದೂ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಅನ್ನಪೂರ್ಣ ಭಾರತಿ ಹೇಳಿದ್ದಾರೆ.