ಬಳ್ಳಾರಿ,ಏ.26 : ಲೋಕಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆ ವ್ಯಾಪ್ತಿಯಲ್ಲಿ ಗುರುವಾರದಂದು ಅಬಕಾರಿ ಪೊಲೀಸ್ ಅಧಿಕಾರಿಗಳಿಂದ ವಿವಿಧೆಡೆ ದಾಳಿ ನಡೆಸಿ ಅಕ್ರಮ ಮದ್ಯ ಸಾಗಾಣಿಕೆ ಸಂಬಂಧಿಸಿದಂತೆ 04 ಮತ್ತು ಅಕ್ರಮವಾಗಿ ಗಾಂಜಾ ಸಾಗಾಣಿಕೆ ಸಂಬಂಧಿಸಿದಂತೆ 01 ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಎನ್.ಮಂಜುನಾಥ ಅವರು ತಿಳಿಸಿದ್ದಾರೆ.
ಬಳ್ಳಾರಿ ನಗರದ ಹಳೇ ಬೆಂಗಳೂರು ರಸ್ತೆಯಲ್ಲಿನ ಸ್ಟೇಟ್ ಲಿಕ್ಕರ್ಸ್ ಮುಂದೆ ಕ್ರಾಸ್ನಲ್ಲಿ ರಸ್ತೆಗಾವಲು ಸಂದರ್ಭದಲ್ಲಿ ನೋಂದಣಿ ಇಲ್ಲದ ಹಸಿರು ಬಣ್ಣದ ದ್ವಿಚಕ್ರ ವಾಹನದಲ್ಲಿ 12.960 ಲೀ. (ಅಂದಾಜು ಮೌಲ್ಯ ರೂ.26,769) ಮದ್ಯವನ್ನು ಸಾಗಾಣಿಕೆ ಮಾಡುತ್ತಿರುವ ವಾಹನ ಸವಾರ ಮತ್ತು ಮದ್ಯವನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ.
ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದ ವ್ಯಕ್ತಿಯೊಬ್ಬರ ಮನೆಯಲ್ಲಿ ಶೋಧನೆ ಮಾಡಿ ಅಕ್ರಮವಾಗಿ 9.720 ಲೀ. ಮದ್ಯ (ಅಂದಾಜು ಮೌಲ್ಯ ರೂ.7,567) ಹೊಂದಿರುವುದನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ.
ಸಿರುಗುಪ್ಪ ತಾಲ್ಲೂಕಿನ ಮಾಟಸೂಗೂರು ಗ್ರಾಮದಿಂದ ಉತ್ತನೂರು ಗ್ರಾಮಕ್ಕೆ ಹೋಗುವ ಕ್ರಾಸ್ ಹತ್ತಿರ ರಸ್ತೆಗಾವಲು ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ 8.640 ಲೀ (ಅಂದಾಜು ಮೌಲ್ಯ ರೂ.28841) ಮದ್ಯ ಹಾಗೂ ವಾಹನವನ್ನು ಜಪ್ತುಪಡಿಸಿ, ಪ್ರಕರಣ ದಾಖಲಿಸಲಾಗಿದೆ.
ಬಳ್ಳಾರಿ ನಗರದ ಕೊಲ್ಮಿ ಚೌಕ್ ರಸ್ತೆಯಿಂದ ಬಾಪೂಜಿ ನಗರಕ್ಕೆ ಹೋಗುವ ರಸ್ತೆಯಲ್ಲಿ ರಸ್ತೆಗಾವಲು ವೇಳೆ ದ್ವಿಚಕ್ರ ವಾಹನದಲ್ಲಿ 21.600 ಲೀ. (ಅಂದಾಜು ಮೌಲ್ಯ ರೂ.54600) ಮದ್ಯ ಸಾಗಾಣಿಕೆ ಮಾಡುವ ವೇಳೆ ಮದ್ಯ ಮತ್ತು ವಾಹನ ಸವಾರನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ಬಳ್ಳಾರಿ ನಗರದ ಸ್ಟೇಡಿಯಂ ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ದ್ವಿಚಕ್ರ ವಾಹನದಲ್ಲಿ 1.510 ಗ್ರಾಂ ಎಲೆ, ಹೂವು, ಮೊಗ್ಗು, ಬೀಜ ಸೇರಿದ ಒಣ ಗಾಂಜಾ (ಅಂದಾಜು ಮೌಲ್ಯ ರೂ.1 ಲಕ್ಷ) ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆಹಚ್ಚಿ, ವಾಹನ ಸವಾರನ್ನು ವಶಕ್ಕೆ ಪಡೆದುಕೊಂಡು ಗಾಂಜಾ ಹಾಗೂ ವಾಹನವನ್ನು ಜಪ್ತುಪಡಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.