ಹೊಸಪೇಟೆ (ವಿಜಯನಗರ) ಫೆಬ್ರವರಿ 02 : ಇದೇ ಮೊದಲ ಬಾರಿಗೆ ಹಂಪಿ ಉತ್ಸವದಲ್ಲಿ ಆಯೋಜಿಸಲಾದ ಎತ್ತುಗಳ ಪ್ರದಶನ ಜನಮನ ಸೂರೆಗೊಂಡಿದೆ. ರೈತರ ಸಂಗಾತಿ, ಉಳುಮೆ ಸಹಕಾರಿಯಾಗಿರುವ ವಿವಿಧ ದೇಶಿ ತಳಿಯ ಎತ್ತುಗಳು ಪ್ರದರ್ಶನದ ಆಕರ್ಷಣೆ ಎನಿಸಿದವು.
ಕಮಲಾಪುರ ಪಟ್ಟಣದ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಹಿಂಭಾಗದ ಆವರಣದಲ್ಲಿ ಇ0ದು ನಡೆದ ಎತ್ತುಗಳ ಪ್ರದರ್ಶನಕ್ಕೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಗೋ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.
ಸುಮಾರು 52 ಜೊತೆ ಎತ್ತುಗಳು ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಹಳ್ಳಿಕಾರ್, ಅಮೃತ್ ಮಹಲ್, ಕಿಲಾರ್ ಸೇರಿದಂತೆ ಹಲವು ದೇಶಿ ತಳಿಯ ಎತ್ತುಗಳು ರೈತರ ಮನಗೆದ್ದವು. ಹೊಸಪೇಟೆ ನಗರದ ಬಂಡಿ ಕೃಷ್ಣಪ್ಪ ಅವರ ಜೋಡೆತ್ತುಗಳು ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿಗೆ ಭಾಜನವಾಗಿ ಮೊದಲ ಸ್ಥಾನಗಳಿಸಿದವು. ಹೊಸಪೇಟೆ ತಾಲ್ಲೂಕಿನ ನಲ್ಲಾಪುರ ಗ್ರಾಮದ ರೈತ ಹನುಮಂತಪ್ಪ ಮುದಿಯಪ್ಪನವರ ಜೋಡೆತ್ತುಗಳು ದ್ವಿತೀಯ ಸ್ಥಾನಗಳಿಸಿದರೆ, ವೆಂಕಟಾಪುರ ಗ್ರಾಮದ ರೈತ ಹುಲಿಗೇಶ್ ಅವರ ಜೋಡೆತ್ತುಗಳು ಮೂರನೇ ಸ್ಥಾನಗಳಿಸಿದವು.
ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿಗೆ ಭಾಜನವಾದ ಜೋಡೆತ್ತುಗಳಿಗೆ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ವೈಯಕ್ತಿಕವಾಗಿ ರೂ.50 ಸಾವಿರ ಬಹುಮಾನ ನೀಡಿದ್ದು, ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ವಿಜಯನಗರ ಶಾಸಕರಾದ ಹೆಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಹರಿ ಬಾಬು ಬಿ.ಎಲ್., ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಜಂಟಿ ನಿರ್ದೇಶಕರಾದ ಡಾ.ಕೃಷ್ಣಮೂರ್ತಿ, ಉಪನಿರ್ದೇಶಕರಾದ ಡಾ.ಕೊಮಾಮೂರ್ತಿ, ಜಾನುವಾರು ಸಂವರ್ಧನ ಕೇಂದ್ರದ ಡಾ.ರವಿಪ್ರಕಾಶ್ ಸೇರಿದಂತೆ ಜನಪ್ರತಿನಿಧಿಗಳು, ಹಲವು ಗಣ್ಯರು, ರೈತರು, ಸಾರ್ವಜನಿಕ ರು ಉಪಸ್ಥಿತರಿದ್ದರು. ಎತ್ತುಗಳ ಪ್ರದರ್ಶನದ ನಿರ್ಣಾಯಕರಾಗಿ ಡಾ.ಎಸ್.ಎಸ್.ಪಾಟೀಲ್ ಹಾಗೂ ಡಾ.ಮಂಜುನಾಥ ಕಾರ್ಯನಿರ್ವಹಿಸಿದರು.