ಬಳ್ಳಾರಿ : ಪ್ರಸ್ತುತ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರು ದಿನನಿತ್ಯ ಜಾತಿಯ ತಾರತಮ್ಯದಿಂದಾಗಿ ಮಾನಸಿಕ ಹಿಂಸೆಗಳನ್ನು ಅನುಭವಿಸುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಸಂವಿಧಾನ ಮತ್ತು ಸರ್ಕಾರದ ಆದೇಶಗಳನುಸಾರ ಸೌಲಭ್ಯಗಳು ಲಭಿಸುತ್ತಿಲ್ಲ. ಇದಕ್ಕೆ ಆಳುವ ವರ್ಗ ಮತ್ತು ಕೆಲವು ಜಾತಿಯ ಮನಸ್ಸಿನ ಅಧಿಕಾರಿಗಳ ತಾತ್ಸಾರ ಮತ್ತು ನಿರ್ಲಕ್ಷ್ಯ ಮನೋಭಾವನೆ ಕಾರಣವಾಗಿದೆ, ಇದರಿಂದಾಗಿ ಎಸ್ಸಿ ಎಸ್ಟಿ ನೌಕರರಿಗೆ ಕಾನೂನುಬದ್ಧವಾಗಿ ಲಭಿಸಬೇಕಾದ ಬಡ್ತಿ ಮುಂತಾದ ಸೌಲಭ್ಯಗಳು ಮರೀಚಿಕೆಯಾಗುತ್ತಿವೆ. ನಿಯಮಾನುಸಾರ, ಇಲಾಖೆಗಳೇ ವೃಂದ ಮತ್ತು ನೇಮಕಾತಿ ನಿಯಮಗಳನುಸಾರ ಅರ್ಹತೆ ಮತ್ತು ಜೇಷ್ಠತೆ ಇದ್ದಾಗ್ಯೂ ಜಾತಿಯಾಧಾರಿತ ವ್ಯವಸ್ಥೆಯೊಳಗೆ ಎಸ್ಸಿ ಎಸ್ಟಿ ನೌಕರರು ವಂಚನೆಗೆ ಒಳಗಾಗುತ್ತಿದ್ದಾರೆ, ಇದನ್ನು ಖಂಡಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿಯು ರಾಜ್ಯ ಮಟ್ಟದ ಸಮಾವೇಶವನ್ನು ಮಾರ್ಚ್ ೦೫ನೇ ತಾರಿಕಿನಂದು ಬೆಂಗಳೂರಿನ ವಸಂತನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳುವ ಮೂಲಕ ರಾಜ್ಯ ಸರ್ಕಾರವನ್ನು ಎಚ್ಚರಿಸಲಾಗುವುದು ಎಂದು ರಾಜ್ಯ ಎಸ್.ಸಿ, ಎಸ್.ಟಿ ಸರ್ಕಾರಿ ನೌಕರರ ಸಂಘದ ಜಿಲ್ಲಾದ್ಯಕ್ಷ ವೆಂಕಟೇಶ್ ತಿಳಿಸಿದರು.
ಅವರು ಇಂದು ನಗರದ ಸ್ನೇಹ ಸಂಪುಟದ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ಪರಿಶಿಷ್ಟರಿಗೆ ಮುಂಬಡ್ರಿಯಲ್ಲಿ ಆಗುತ್ತಿರುವ ವಿಳಂಬವನ್ನು ಸರಿಪಡಿಸಿಬೇಕು, ಆರೋಗ್ಯ ಸಂಜೀವಿನಿ ಸೌಲಭ್ಯ ಕಲ್ಪಿಸಬೇಕು, ಹಳೆ ಪಿಂಚಣ ವ್ಯವಸ್ಥೆಯನ್ನು ಮರು ಜಾರಿಗೋಳಿಸಬೇಕು, ಏಳನೆ ವೇತನ ಆಯೋಗವನ್ನು ಜಾರಿಗೆ ತರಬೇಕು ಎಂದು ಸಂವಿಧಾನ ಉಳಿವಿಗಾಗಿ ಸಭೆ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವುದೆಂದರು.
ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮಂಜೂರಾಗಿರುವ ೭.೭೫ ಲಕ್ಷ ಹುದ್ದೆಗಳ ಪೈಕಿ ಸುಮಾರು ೫.೨೩ ಲಕ್ಷ ಸರ್ಕಾರಿ ನೌಕರರು ಮಾತ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಸುಮಾರು ೮೫ ಸಾವಿರಕ್ಕೂ ಹೆಚ್ಚು ಪರಿಶಿಷ್ಠ ಜಾತಿ, ಅಂದಾಜು ೨೦ ಸಾವಿರಕ್ಕೂ ಹೆಚ್ಚು ಪರಿಶಿಷ್ಟ ಪಂಗಡಗಳ ನೌಕರರು ವಿವಿಧ ಇಲಾಖೆಗಳಲ್ಲಿ, ವಿವಿಧ ಹಂತಗಳಲ್ಲಿ ಸರ್ಕಾರದ ಕೆಲಸ ನಿರ್ವಹಿಸುತ್ತಿದ್ದಾರೆ. ರಾಜ್ಯ ಮಟ್ಟದಲ್ಲಿ ಸುಮಾರು ೨.೫೦ ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿದ್ದು, ರಾಜ್ಯದ ವಿವಿಧ ಇಲಾಖೆಗಳಲ್ಲಿ ಸುಮಾರು ೨೨,೫೦೦ ಬ್ಯಾಕ್ಲಾಗ್ ಹುದ್ದೆಗಳು ಭರ್ತಿ ಮಾಡದೇ ಖಾಲಿ ಉಳಿದುಕೊಂಡಿರುತ್ತವೆ. ಸ್ವಾತಂತ್ರ್ಯ ದೊರೆತು ೭೬ ವರ್ಷಗಳು ಮುಕ್ತಾಯಗೊಳ್ಳುವ ಹಂತಕ್ಕೆ ತಲುಪಿದ್ದರೂ ಇನ್ನೂ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಮೀಸಲಿರುವ ೧೭:೭ ಪ್ರಮಾಣ ಮೀಸಲಾತಿಯನ್ನು ಜಾರಿಗೊಳಿಸದಿರುವುದು ಖಂಡನೀಯ ಎಂದರು.
ಈ ಸಂದರ್ಭದಲ್ಲಿ ತಿಪ್ಪೆರುದ್ರಪ್ಪ, ಪಾಂಡು ರಾಥೋಡ್, ಸಿ ಹನುಮಂತಪ್ಪ, ವಿಜಯಕುಮಾರ್, ಬಿ ಗೋಪಾಲಕೃಷ್ಣ, ಡಿ ವೆಂಕಟೇಶುಲು ಇದ್ದರು.