ಬೆಂಗಳೂರು, ಏ.19: ಸಿಸಿಬಿ ಪೊಲೀಸರ ಮೇಲೆಯೇ ನೈಜೀರಿಯಾ ಪ್ರಜೆಗಳು ಹಲ್ಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬೆಂಗಳೂರಿನ ರಾಜಾನುಕುಂಟೆ ಬಳಿ 8 ನೈಜೀರಿಯಾ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ. ಹಲ್ಲೆ ಹಿನ್ನಲೆ ಇಂದು(ಏ.19) ನೈಜೀರಿಯಾ ಪ್ರಜೆಗಳ ಪತ್ತೆಗೆ ರಾಜ್ಯದ ಅರೆಸೇನಾ ತುಕಡಿ (ಡಿಸ್ವ್ಯಾಟ್ ಪಡೆ)ಯನ್ನು ಪೊಲೀಸರು ಕರೆದೊಯ್ದಿದಿದ್ದು, ಆರೋಪಿಗಳನ್ನು ಬಂಧಿಸಿ ಕರೆತರಲಾಗುತ್ತಿದೆ.
ಘಟನೆ ವಿವರ :
ಕಳೆದ ರಾತ್ರಿ(ಏ.18) ಡ್ರಗ್ ಪೆಡ್ಲರ್ ಇರುವ ಕುರಿತು ಮಾಹಿತಿ ಬಂದ ಹಿನ್ನಲೆ ಸಿಸಿಬಿ ಪೊಲೀಸರು ರಾಜನಕುಂಟೆ ಪೊಲೀಸ್ ಠಾಣೆಯ ಮಾವಳ್ಳಿ ಪುರದಲ್ಲಿ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಮುಂದಾದ ನೈಜೀರಿಯಾ ಪ್ರಜೆಗಳು ಸೇರಿಕೊಂಡು ಸಿಸಿಬಿ ಇನ್ಸ್ ಪೆಕ್ಟರ್ ಸುಬ್ರಹ್ಮಣ್ಯಸ್ವಾಮಿ ಸೇರಿದಂತೆ ಐದಕ್ಕೂ ಹೆಚ್ಚು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ತಕ್ಷಣ ಸಿಸಿಬಿ ಪೊಲೀಸರು 112 ಗೆ ಕರೆ ಮಾಡಿದ್ದರು. ಕೂಡಲೇ ಘಟನಾ ಸ್ಥಳಕ್ಕೆ ರಾಜಾನುಕುಂಟೆ ಹೊಯ್ಸಳ ಸಿಬ್ಬಂದಿಗಳು ಬಂದಿದ್ದಾರೆ. ಹೊಯ್ಸಳ ಸಿಬ್ಬಂದಿ ಮೇಲೂ ಹಲ್ಲೆ ಮಾಡಿ ಪರಾರಿಯಾಗಿದ್ದರು.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ
ಇನ್ನು ಸಿಸಿಬಿ ಒಂದು ಜೀಪ್ ಹಾಗೂ ರಾಜಾನುಕುಂಟೆ ಪೊಲೀಸ್ ಠಾಣೆಯ ಹೊಯ್ಸಳ ಜೀಪ್ನ ಗಾಜನ್ನು ಕಬ್ಬಿಣದ ರಾಡು, ಕಲ್ಲಿನಿಂದ ಪುಡಿ ಮಾಡಿದ್ದರು. ಘಟನೆಯಲ್ಲಿ ಗಾಯಗೊಂಡ ಸಿಬ್ಬಂದಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ಆಸ್ಪತ್ರೆಗೆ ಆಗಮಿಸಿ ಗಾಯಾಳು ಸಿಬ್ಬಂದಿ ಆರೋಗ್ಯ ವಿಚಾರಸಿದರು. ನಂತರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಗಳ ಪತ್ತೆಗೆ ರಾತ್ರಿ ಇಡೀ ಕಾರ್ಯಾಚರಣೆ ನಡೆಸಿದ್ದರು. ಇದೀಗ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.