ಬಳ್ಳಾರಿ: ಬಳ್ಳಾರಿ ನಗರದಲ್ಲಿ ಕ್ರಿಕೇಟ್ ಮೈದಾನ ಸೇರಿದಂತೆ ಕ್ರೀಡೆಗಳಿಗೆ ಮೂಲಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಎಸ್.ಎಸ್.ಕ್ರಿಕೇಟ್ ಕ್ಲಬ್ ಅಧ್ಯಕ್ಷ ಎಸ್.ಎಸ್.ಮೆಹಬೂಬ್ ಬಾಷ ಅವರು ತಮ್ಮ 51ನೇ ವಯಸ್ಸಿನಲ್ಲಿ ಬಳ್ಳಾರಿಯಿಂದ ಬೆಂಗಳೂರಿಗೆ ‘ಮ್ಯಾರಥಾನ್ ಓಟ’ ಕೈಗೊಳ್ಳುವ ಮೂಲಕ ಪ್ರತಿಭಟನೆ ಆರಂಭಿಸಿದರು.
ನಗರದ ಕನಕದುರ್ಗಮ್ಮ ದೇವಸ್ಥಾನದಲ್ಲಿ ಸೋಮವಾರ ಬೆಳಗಿನ ಜಾವ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದ ಬಳಿಕ ದೇವಸ್ಥಾನದ ಆವರಣದಿಂದ ‘ಮ್ಯಾರಥಾನ್ ಓಟ’ವನ್ನು ಆರಂಭಿಸಿದರು. ಕೆಳಸೇತುವೆ, ಗಡಿಗಿ ಚನ್ನಪ್ಪ ವೃತ್ತ, ಮೋತಿ ವೃತ್ತ, ಹೊಸ ಬಸ್ ನಿಲ್ದಾಣ, ಬೆಂಗಳೂರು ರಸ್ತೆ ಮೂಲಕ ಬೆಂಗಳೂರಿಗೆ ಮ್ಯಾರಥಾನ್ ಓಟ ನಡೆಸಿದರು.
ಇದಕ್ಕೆ ಕ್ಲಬ್ ಉಪಾಧ್ಯಕ್ಷರು, ಪಾಲಿಕೆ ಸದಸ್ಯ ಎಂ.ಪ್ರಭಂಜನ್ ಕುಮಾರ್, ಬಳ್ಳಾರಿ ಸೈಕ್ಲಿಂಗ್ ಕ್ಲಬ್ ಸಹಕಾರ ನೀಡಿದ್ದಾರೆ.
ಇದಕ್ಕೂ ಮುನ್ನ ಸುದ್ದಿಗಾರರಿಗೆ ಮಾತನಾಡಿದ ಮೆಹಬೂಬ್ ಬಾಷ, ಬಳ್ಳಾರಿ ನಗರದಲ್ಲಿ ಕ್ರಿಕೇಟ್ ಆಟಕ್ಕೆ ಮೈದಾನ ಸೇರಿ ಮೂಲಸೌಲಭ್ಯಗಳೇ ಇಲ್ಲ. ಬಳ್ಳಾರಿಯಲ್ಲಿ ಸಾಕಷ್ಟು ಜನ ಪ್ರತಿಭಾವಂತ ಕ್ರಿಕೇಟ್ ಆಟಗಾರರು ಇದ್ದಾರೆ. ಆದರೆ, ಪ್ರತಿಭೆ ಪ್ರದರ್ಶನಕ್ಕೆ ಮೈದಾನ ಸೇರಿ ಮೂಲಭೂತ ಸೌಲಭ್ಯಗಳೇ ಇಲ್ಲ. ಹಾಗಾಗಿ ಬಳ್ಳಾರಿಯಿಂದ ‘ಮ್ಯಾರಥಾನ ಓಟ’ದ ಮೂಲಕ ಬೆಂಗಳೂರಿಗೆ ತೆರಳಿ, ಅಲ್ಲಿ ಕರ್ನಾಟಕ ರಾಜ್ಯ ಕ್ರಿಕೇಟ್ ಅಸೋಸಿಯೇಷನ್ ಗೆ ಮನವಿ ಸಲ್ಲಿಸಿ, ಬಳ್ಳಾರಿಯಲ್ಲೂ ಕ್ರಿಕೇಟ್ ಗೆ ಮೈದಾನ ಸೇರಿ ಮೂಲಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬಳ್ಳಾರಿಯಿಂದ ಮ್ಯಾರಥಾನ್ ಓಟದ ಮೂಲಕ 7-8 ದಿನಗಳೊಳಗಾಗಿ ಬೆಂಗಳೂರಿಗೆ ತೆರಳುವ ಗುರಿ ಹೊಂದಲಾಗಿದೆ. ಪ್ರತಿದಿನ ಬೆಳಗ್ಗೆ 20 ಕಿಮೀ, ಸಂಜೆ 20 ಕಿಮೀ ಒಟ್ಟು 40 ಕಿಮೀಗಳಂತೆ ಓಟವನ್ನು ನಡೆಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದ್ದೇನೆ. ಕ್ಲಬ್ ಉಪಾಧ್ಯಕ್ಷ ಪಾಲಿಕೆ ಸದಸ್ಯ ಪ್ರಭಂಜನ್ ಕುಮಾರ್, ಬಳ್ಳಾರಿ ಸೈಕ್ಲಿಂಗ್ ಕ್ಲಬ್ ನವರು ಸಹ ಸಹಕಾರ ನೀಡಿದ್ದಾರೆ ಎಂದು ಅವರು ವಿವರಿಸಿದರು.
ಪಾಲಿಕೆ ಸದಸ್ಯ, ಎಸ್.ಎಸ್.ಕ್ರಿಕೇಟ್ ಕ್ಲಬ್ ಉಪಾಧ್ಯಕ್ಷ ಪ್ರಭಂಜನ ಕುಮಾರ್ ಮಾತನಾಡಿ, ಕ್ರಿಕೇಟ್ ಗಾಗಿ ಬೆಂಗಳೂರಿಗೆ ಓಟ ಕೈಗೊಂಡಿರುವ ಮೆಹಬೂಬ್ ಬಾಷ ಅವರು, ಮೊದಲಿನಿಂದಲೂ ಕ್ರಿಕೇಟ್ ಗಾಗಿ ಶ್ರಮಿಸುತ್ತಿದ್ದಾರೆ. ಸಾಕಷ್ಟು ಮಕ್ಕಳಿಗೆ ಕ್ರಿಕೇಟ್ ಕಲಿಸುತ್ತಿದ್ದಾರೆ. ಆದರೆ, ಬಳ್ಳಾರಿಯಲ್ಲಿ ಸಮರ್ಪಕವಾದ ಮೂಲಸೌಲಭ್ಯಗಳೇ ಇಲ್ಲ. ಬಳ್ಳಾರಿಯಲ್ಲಿ ಸಾಕಷ್ಟು ಅನುದಾನಗಳು ಇವೆ. ಆದರೆ, ಅವುಗಳ ಬಳಕೆ ಸಮರ್ಪಕವಾಗಿ ಆಗುತ್ತಿಲ್ಲ. ಮುಂದಿನ ದಿನಗಳಲ್ಲಾದರೂ ಮಾಬೇಕಾಗಿದೆ.
ಈ ವೇಳೆ ಕ್ಲಬ್ ಗೌರವಾಧ್ಯಕ್ಷ ಎಂ.ನಾರಾಯಣರಾವ್, ಬಳ್ಳಾರಿ ಸೈಕ್ಲಿಂಗ್ ಕ್ಲಬ್ ನ ಮುಖ್ಯಸ್ಥ ಡಾ. ರವಿಶಂಕರ್, ಕೃಷ್ಣಾರೆಡ್ಡಿ, ಹಳೆಯ ಕ್ರಿಕೇಟ್ ಸ್ನೇಹಿತರಾದ ಬಿ.ಬಾಲಕೃಷ್ಣ, ಹುಸೇನ್, ಸೀನಾ, ಬಾಬು, ಶ್ರೀನಿವಾಸ್ ಸೇರಿ ಹಲವರು ಇದ್ದರು.