ಬೆಂಗಳೂರು, ಜ, ೧೮: ಮುಂದಿನ ತಿಂಗಳು ಅಂದರೆ ಫೆಬ್ರವರಿ ೧೨ರಿಂದ ಫೆಬ್ರವರಿ ೨೩ರವರೆಗೆ ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಫೆಬ್ರವರಿ ೧೬ರಂದು ಕರ್ನಾಟಕ ರಾಜ್ಯ ಬಜೆಟ್ ಮಂಡನೆಯಾಗಲಿದೆ. ಇನ್ನು ವಿಧಾನಮಂಡಲ ಅಧಿವೇಶನ ಅಧಿವೇಶನದ ಮೊದಲ ದಿನ (ಫೆ.೧೨) ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಲಿದ್ದಾರೆ. ಈ ಸಂಬAಧ ನಿನ್ನೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗಿದೆ.
ಮುಂದೆ ಲೋಕಸಭಾ ಚುನಾವಣೆ ಬರಲಿದೆ. ಹೀಗಾಗಿ ಚುನಾವಣೆ ನೀತಿ ಸಂಹಿತೆ ಇದೇ ಮಾರ್ಚ್ನಿಂದಲೇ ಜಾರಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಜೆಟ್ನ್ನು ಫೆಬ್ರವರಿಯಲ್ಲಿ ಮಂಡಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೀರ್ಮಾನಿಸಿದೆ.
ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ದರಾಮಯ್ಯನವರು ಏನೆಲ್ಲಾ ಹೊಸ-ಹೊಸ ಯೋಜನೆಗಳನ್ನು ಘೋಷಣೆ ಮಾಡುತ್ತಾರೆ ಎನ್ನುವುದು ಒಂದೆಡೆ ಕುತೂಹಲ ಇದೆ. ಆದ್ರೆ, ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡಲು ಸರ್ಕಾರದಲ್ಲಿ ಅನುದಾನದ ಕೊರೆತ ಎದುರಾಗಿದೆ. ಇದ್ದ ಅನುದಾನ ಐದು ಗ್ಯಾರಂಟಿ ಯೋಜನೆಗಳಿಗೆ ಸಾಲುತ್ತಿಲ್ಲ. ಹೀಗಾಗಿ ಹೊಸ ಯೋಜನೆಗಳ ಘೋಷಣೆ ಮಾಡುವ ಸಾಧ್ಯತೆಗಳು ಕಡಿಮೆ. ಈ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಂದಿದ್ದ ಕೆಲ ಯೋಜನೆಗಳಿಗೆ ಮತ್ತೆ ಜೀವ ತುಂಬಲಿದ್ದಾರೆ. ಹಾಗೇ ಸದ್ಯದ ಕಾರ್ಯಕ್ರಮಗಳನ್ನೇ ಮುಂದುವರಿಸುವ ಸಾಧ್ಯತೆಗಳಿದೆ. ಒಟ್ಟಿನಲ್ಲಿ ಮುಂದೆ ಚುನಾವಣೆ ಇರುವುದರಿಂದ ಈ ಬಾರಿ ಸಿದ್ದರಾಮಯ್ಯನವರ ಬಜೆಟ್ ತೀವ್ರ ಕುತೂಹಲ ಮೂಡಿಸಿದೆ.
ಎಸ್ಸಿ ಒಳ ಮೀಸಲಾತಿ ಜಾರಿ ಕುರಿತು ಕೇಂದ್ರಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಅಸ್ತು
ಪರಿಶಿಷ್ಟ ಜಾತಿಗೆ(ಎಸ್ಸಿ) ಒಳ ಮೀಸಲಾತಿ ಕಲ್ಪಿಸುವ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಈ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಜ.೧೮ ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಯಲ್ಲಿರುವ ವಿವಿಧ ಸಮುದಾಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಒಪ್ಪಿಗೆ ಸೂಚಿಸಲಾಗಿದೆ. ಸಂಪುಟ ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರಾದ ಎಚ್ಕೆ ಪಾಟೀಲ್ ಹಾಗೂ ಎಚ್ಸಿ ಮಹಾದೇವಪ್ಪ ಅವರು, ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಕಲ್ಪಿಸುವ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಬಗ್ಗೆ ವಿವರಿಸಿದರು.
ವರದಿ ಕುರಿತು ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ಹೊಸ ಜನಗಣತಿ ಪ್ರಕಾರ ಮೀಸಲಾತಿ ಪರಿಷ್ಕರಿಸಲು ಸಂವಿಧಾನಬದ್ಧವಾಗಿ ರಾಜ್ಯಗಳಿಗೆ ಅಧಿಕಾರ ನೀಡುವಂತೆ ಮತ್ತು ಒಳ ಮೀಸಲಾತಿಗಾಗಿ ಸಂವಿಧಾನದ ಅನುಚ್ಛೇದ ೩೪೧ಕ್ಕೆ ತಿದ್ದುಪಡಿ ತರುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ ಎಂದರು.
ಇದರೊAದಿಗೆ ಒಳ ಮೀಸಲಾತಿ ವಿವಾದ ಈಗ ಕೇಂದ್ರ ಸರ್ಕಾರದ ಅಂಗಳ ತಲುಪಿದೆ. ಈ ಹಿಂದೆ ಬಿಜೆಪಿ ಸರ್ಕಾರ ವರ್ಗೀಕರಣ ಮಾಡಿ ಆದೇಶ ಹೊರಡಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಈ ವಿಚಾರ ಸುಪ್ರೀಂನಲ್ಲಿ ವಿಚಾರಣೆ ನಡೆಯುತ್ತಿದೆ. ಈಗ ಸಿದ್ದರಾಮಯ್ಯನವರ ಸರ್ಕಾರ ಕಾನೂನು ತಿದ್ದುಪಡಿ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡಿ ಕೈತೊಳೆದುಕೊಂಡಿದೆ.