ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಜ,೨೦: ಅಸ್ಪೃಶ್ಯತೆ ನಿರ್ಮೂಲನೆಗೆ ಕಾನೂನುಗಳಿದ್ದರೂ, ಹಳ್ಳಿಗಳಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ, ಇತ್ತೀಚೆಗೆ, ಅಸ್ಪೃಶ್ಯತೆ ಆಚರಣೆಯ ಕ್ರೌರ್ಯಗಳು ವರದಿಯಾಗಿ, ಬೆಳಕಿಗೆ ಬರುತ್ತಿವೆ. ಅದೇ ರೀತಿ, ಬಳ್ಳಾರಿ ಜಿಲ್ಲೆಯಲ್ಲಿ ಹೋಟೆಲ್ ಮಾಲೀಕರೊಬ್ಬರು ಅಸ್ಪೃಶ್ಯತೆಯ ಕ್ರೌರ್ಯ ಮೆರೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಜಿಲ್ಲೆಯ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದ ಹೋಟೆಲ್ನಲ್ಲಿ ದಲಿತರಿಗೆ ಊಟ ನೀಡಲು ನಿರಾಕರಿಸಿದ್ದಾರೆ. ‘ಹೋಟೆಲ್ ಮುಚ್ಚುತ್ತೇನೆ. ಆದರೆ, ನಿಮಗೆ ಊಟ ಕೊಡುವುದಿಲ್ಲ’ ಎಂದು ಹೋಟೆಲ್ ಮಾಲೀಕರು ದಲಿತ ಯುವಕರಿಗೆ ಹೇಳಿದ್ದಾರೆ ಎಂದು ವರದಿಯಾಗಿದೆ.
ಆಕೆಯ ನಡೆಯನ್ನು ಖಂಡಿಸಿರುವ ಯುವಕರು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಕರಣದ ಮಾಹಿತಿ ಪಡೆದ ಕುರುಗೋಡು ತಹಶೀಲ್ದಾರ್ ರಾಘವೇಂದ್ರ ಹಾಗೂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಈ ಘಟನೆ ಕೆಲ ತಿಂಗಳ ಹಿಂದೆ ಗ್ರಾಮದಲ್ಲಿ ನಡೆದಿದೆ. ಆದರೆ ಘಟನೆಯ ವಿಡಿಯೋ ಮಂಗಳವಾರ ವೈರಲ್ ಆಗಿದ್ದು, ಎಸ್ಸಿ ಸಮುದಾಯದವರು ಪ್ರತಿಭಟನೆ ನಡೆಸಿದ ಬಳಿಕ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ನಂತರ ಕುರುಗೋಡು ತಹಶೀಲ್ದಾರ್ ರಾಘವೇಂದ್ರ ಹಾಗೂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಪ್ರಕರಣ ಸಂಬAಧ ಹೋಟೆಲ್ ಮಾಲೀಕರಾಗಿರುವ ನಾಗವೇಣಿ ಮತ್ತು ವೀರಭದ್ರಪ್ಪ ವಿರುದ್ಧ ಪೊಲೀಸರು ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಂಡಿದ್ದಾರೆ.