ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಜ.೨೦: ಭಾರತದ ನಾಗರಿಕರಾದ ನಾವುಗಳು ಸಾರ್ವಭೌಮ, ಸಮಾಜವಾದಿ ಜಾತ್ಯಾತೀತ ಸೇರಿದಂತೆ ಸಂವಿಧಾನದ ಎಲ್ಲ ಆಶೋತ್ತರಗಳನ್ನು ಯುವ ಪೀಳಿಗೆ ನಿತ್ಯ ಜೀವನದಲ್ಲಿ ಅಳಡಿಸಿಕೊಂಡು ನಡೆದರೆ ದೇಶದ ಸಮಗ್ರ ಅಭಿವೃದ್ದಿ ಸಾಧ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ನಾಗರಾಜ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಬಳ್ಳಾರಿ ತಾಲ್ಲೂಕಿನ ಮೋಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ “ಡಾ.ಬಿ.ಆರ್ ಅಂಬೇಡ್ಕರವರ ಓದು ಕಾರ್ಯಕ್ರಮ”ದಲ್ಲಿ ಅವರು ಮಾತನಾಡಿದರು.
ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ, ಬಾಲ್ಯ ವಿವಾಹ ಹಾಗೂ ಅಪೌಷ್ಠಿಕತೆ ಸೇರಿದಂತೆ ವಿವಿಧ ರೀತಿಯ ತಾರತಮ್ಯಗಳು ರೂಢಿಯಲ್ಲಿವೆ. ಇದು ನಿವಾರಣೆಯಾಗುವ ನಿಟ್ಟಿನಲ್ಲಿ ಎಲ್ಲರೂ ಶ್ರಮವಹಿಸಬೇಕಿದೆ ಎಂದು ಹೇಳಿದರು.
ಇವತ್ತಿನ ಯುವ ಪೀಳಿಗೆ ಶಿಕ್ಷಣದ ಜೊತೆಗೆ ಕ್ರೀಡೆ, ಕಲೆ, ಸಂಗೀತ, ಸಾಹಿತ್ಯ, ಹೀಗೇ ವಿವಿಧ ಕೌಶಲ್ಯಗಳಲ್ಲಿ ಆಸಕ್ತಿ ಇಟ್ಟು ತಮ್ಮದೇ ಆದ ಆಯ್ಕೆಗಳನ್ನು ತೆಗೆದುಕೊಂಡು ಸಾಧನೆ ಮಾಡುವುದರ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಹೇಳಿದರು.
ಓದು ಕಾರ್ಯಕ್ರಮದ ನಿಮಿತ್ಯ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಉಪನ್ಯಾಸಕರಾದ ಡಾ.ಹೆಚ್.ತಿಪ್ಪೇಸ್ವಾಮಿ, ಮೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಇಸ್ಮಾಯಿಲ್ ಮಕಂಧರ್, ಕಾಲೇಜಿನ ಮುಖ್ಯಸ್ಥರು ಹಾಗೂ ಸಹ ಪ್ರಾಧ್ಯಾಪಕರಾದ ಡಾ.ಬಿ.ಜಿ.ಕಲಾವತಿ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.