ಅಯೋಧ್ಯೆ,ಜ,೨೩: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ನಂತರ ಇಂದಿನಿಂದ ಸಾರ್ಜನಿಕರಿಗೆ ಉಚಿತ ಅವಕಾಶ ಕಲ್ಪಿಸಲಾಗಿದ್ದು, ವಿಶೇಷ ಪೂಜೆ ಹಾಗೂ ಬಾಲರಾಮನ ದರ್ಶನಕ್ಕೆ ಭಕ್ತರ ದಂಡೇ ಹರಿದುಬರ್ತಿದೆ. ಮುಂಜಾನೆ ೩ ಗಂಟೆಯಿAದಲೇ ಭಕ್ತರು ಗುಂಪು ಗುಂಪಾಗಿ ಆಗಮಿಸುತ್ತಿದ್ದು, ದೇವಾಲಯದ ಆವರಣದಲ್ಲಿ ನೂಕು ನುಗ್ಗಲು ಉಂಟಾಗಿದೆ. ಕೇಸರಿ ಧ್ವಜ ಹಾಗೂ ಉಡುಪಿನೊಂದಿಗೆ ಭಕ್ತರು ದಂಡು ದಂಡಾಗಿ ಆಗಮಿಸುತ್ತಿದ್ದು, ಜೈಶ್ರೀರಾಮ್ ಘೋಷಣೆ ಕೂಗಿ ಸಂಭ್ರಮಿಸುತ್ತಿದ್ದಾರೆ.
೫೦೦ ವರ್ಷಗಳ ನಂತರ ತನ್ನ ಜನ್ಮಭೂಮಿಯಲ್ಲಿ ನೆಲೆಸಿದ ಆದರ್ಶಪುರುಷ ರಾಮನ ದರ್ಶನಕ್ಕಾಗಿ ದೇಶದ ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಭಕ್ತರಿಗೆ ಬಾಲರಾಮನ ದರ್ಶನಕ್ಕಾಗಿ ಎರಡು ಅವಧಿಯನ್ನು ನಿಗದಿಪಡಿಸಲಾಗಿದೆ. ಮೊದಲ ಅವಧಿಯು ಬೆಳಗ್ಗೆ ೭ ರಿಂದ ೧೧-೩೦ರವರೆಗೆ ಮತ್ತು ಎರಡನೇ ಅವಧಿಯು ಮಧ್ಯಾಹ್ನ ೨ ಗಂಟೆಯಿAದ ಸಂಜೆ ೭ ಗಂಟೆಯವರೆಗೆ ನಿಗದಿಪಡಿಸಲಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. ನಿತ್ಯ ಸಂಜೆ ೬-೩೦ಕ್ಕೆ ವಿಶೇಷ ಭಜನೆ, ಶೃಂಗಾರ ಆರತಿ ಕಾರ್ಯಕ್ರಮ ನಡೆಯಲಿದ್ದು, ಒಂದು ದಿನ ಮೊದಲೇ ಭಕ್ತರು ತಮ್ಮ ಸ್ಥಾನವನ್ನು ಕಾಯ್ದಿರಿಸಬೇಕು. ಸಂಜೆ ೭ ಗಂಟೆಗೆ ಬಾಲರಾಮನಿಗೆ ಆರತಿ ನೆರವೇರಲಿದ್ದು, ಆರತಿ ದರ್ಶನಕ್ಕಾಗಿ ಬರುವ ಭಕ್ತರು ಟ್ರಸ್ಟ್ ಕಚೇರಿಯಲ್ಲಿ ಮುಂಚಿತವಾಗಿ ಪಾಸ್ ಪಡೆದಿರಬೇಕು ಎಂದು ಅವರು ಹೇಳಿದ್ದಾರೆ.