ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಜ,೨೩: ಸಶಸ್ತ್ರ ಹಾಗೂ ಕ್ರಾಂತಿಯಿಂದ ಮಾತ್ರ ಸ್ವಾತಂತ್ರ್ಯ ಗಳಿಸಲು ಸಾಧ್ಯ ಎಂದು ನಂಬಿದ್ದವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ನೇತಾಜಿ ಅವರ ೧೨೮ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ನೇತಾಜಿ ಅವರು ಜೈಹಿಂದ್ ಘೋಷಣೆ ನೀಡುವುದರೊಂದಿಗೆ ರಕ್ತ ಕೊಡಿ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ದೇಶದ ಯುವ ಸಮೂಹಕ್ಕೆ ಸಂದೇಶ ನೀಡಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.
ಭಾರತೀಯ ರಾಷ್ಟ್ರೀಯ ಸೇನೆ ಸ್ಥಾಪಿಸಿ,ಜರ್ಮನಿ ದೇಶದ ಬಿಸ್ಮಾರ್ಕ್,ಇಟಲಿಯ ಮುಸಲೋನಿ,ಜಪಾನ್, ಆಸ್ಟ್ರಿಯಾ ದೇಶದ ಸಹಕಾರ ಪಡೆಯಲು ಯತ್ನಿಸಿದವರು.
ದೇಶದ ಹಿತಕ್ಕೆ ಧಕ್ಕೆಯಾಗುವಂಥಹ ಕಾನೂನನ್ನು ವಿರೋಧಿಸುತ್ತಿದ್ದರು.ಅಪ್ಪಟ ದೇಶಾಭಿಮಾನಿಗಳಾಗಿದ್ದರು.ಆದ್ದರಿಂದ ವಿದ್ಯಾರ್ಥಿಗಳು ಕೂಡ ನೇತಾಜಿ ಅವರ ಆದರ್ಶ ಹಾಗೂ ದೇಶಾಭಿಮಾನದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಪ್ರತಿಭಾವಂತ ವಿದ್ಯಾರ್ಥಿಗಳಾದ ವಾಲ್ಮೀಕಿ ಉಮಾ ಹಾಗೂ ಕುರುಬರ ಸಂದೀಪ ಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಕರಾದ ಬಸವರಾಜ, ದಿಲ್ಷಾದ್ ಬೇಗಂ, ಮೋದಿನ್ ಸಾಬ್, ಸುಧಾ, ವೈಶಾಲಿ, ಶ್ವೇತಾ, ಉಮ್ಮೆಹಾನಿ, ಶಶಮ್ಮ ಮುಂತಾದವರು ಉಪಸ್ಥಿತರಿದ್ದರು.