ಬೆಂಗಳೂರು,ಜ,೨೪: ಪ್ರತಿವರ್ಷದಂತೆ ಈ ವರ್ಷ ಕೂಡ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರಕಟವಾಗಿದೆ. ಕರ್ನಾಟಕದ ಒಂಬತ್ತನೇ ವರ್ಷದ ಚಾರ್ವಿ ಅನಿಲ್ಕುಮಾರ್ ಆಯ್ಕೆಯಾಗಿದ್ದಾಳೆ.
ಚೆಸ್ ಪಂದ್ಯಾವಳಿಯಲ್ಲಿ ಐದಕ್ಕೂ ಹೆಚ್ಚು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗಳಿಸಿರುವ ಬೆಂಗಳೂರು ಮೂಲದ ೯ ವರ್ಷದ ಚಾರ್ವಿ ಜನವರಿ ೨೨ ರಂದು ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕೈಯಿಂದ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾಳೆ. ಜಾರ್ಜಿಯಾದಲ್ಲಿ ವಿಶ್ವ ಕೆಡೆಟ್ಸ್ ಚೆಸ್ ಚಾಂಪಿಯನ್ಶಿಪ್ ನಲ್ಲಿ ೮ ವರ್ಷದೊಳಗಿನವರ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿ ಚಾರ್ವಿ ಹೊರಹೊಮ್ಮಿದ್ದಾಳೆ.
ಚಾರ್ವಿ ಪ್ರಸ್ತುತ ಫೆಡರೇಶನ್ ಇಂಟರ್ನ್ಯಾಷನಲ್ ಡೆಸ್ ಎಚೆಕ್ಸ್ ನಲ್ಲಿ ೧೧ ವರ್ಷದೊಳಗಿನವರ ವಿಭಾಗದಲ್ಲಿ ವಿಶ್ವ ಚೆಸ್ ಫೆಡರೇಶನ್ ಆಟದಲ್ಲಿ ೧,೯೧೫ ಶ್ರೇಯಾಂಕಗಳನ್ನು ಹೊಂದಿದ್ದಾರೆ. ವುಮನ್ ಕ್ಯಾಂಡಿಡೇಟ್ ಮಾಸ್ಟರ್ ಶೀರ್ಷಿಕೆಯಡಿಯಲ್ಲಿ ಅವರು ಮಹಿಳಾ ವಿಭಾಗದಲ್ಲಿ ವಿಶ್ವದ ನಂಬರ್ ಒನ್ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾಳೆ.
ಈ ಸಂದರ್ಭದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಚಾರ್ವಿ ತಂದೆ ಅನಿಲ್ ಕುಮಾರ್, ನನ್ನ ಮಗಳು ಐದನೇ ವಯಸ್ಸಿನಲ್ಲಿ ಚೆಸ್ ಆಡಲು ಪ್ರಾರಂಭಿಸಿದಳು. ನಾನು ಮತ್ತು ನನ್ನ ಪತ್ನಿ ಇಬ್ಬರೂ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಚಾರ್ವಿಯ ಚೆಸ್ ವೃತ್ತಿಗೆ ಪೂರ್ಣ ಸಮಯವನ್ನು ನೀಡಲು ನನ್ನ ಪತ್ನಿ ಕೆಲಸ ತೊರೆದಿದ್ದಾಳೆ, ಮಗಳ ಸಾಧನೆ ಬಗ್ಗೆ ಅಪಾರ ಹೆಮ್ಮೆಯಿದೆ ಎನ್ನುತ್ತಾರೆ. ಅವರು ಚಿಕ್ಕವಳಿದ್ದಾಗ ಡೇ ಕೇರ್ ನಲ್ಲಿ ಬಿಟ್ಟು ಹೋಗುತ್ತಿದ್ದೆವು. ಅಲ್ಲಿ ನಮ್ಮ ಮಗಳು ದೊಡ್ಡ ಮಕ್ಕಳಿಂದ ಚೆಸ್ ಆಟದ ಬಗ್ಗೆ ಕಲಿತಳು. ಅವಳಿಗೆ ಚೆಸ್ ಬೋರ್ಡ್ ಖರೀದಿಸುವಂತೆ ಒತ್ತಾಯಿಸಿದಳು. ನನಗೆ ಮತ್ತು ನನ್ನ ಹೆಂಡತಿಗೆ ಚೆಸ್ ಬಗ್ಗೆ ಏನೂ ತಿಳಿದಿರಲಿಲ್ಲ, ನಾವು ಯುಟ್ಯೂಬ್ ಟ್ಯುಟೋರಿಯಲ್ಗಳಿಂದ ಕಲಿಯುತ್ತಿದ್ದೆವು ನಂತರ ಅವಳಿಗೆ ಕಲಿಸಿಕೊಟ್ಟೆವು. ನಂತರ ಮಗಳನ್ನು ಕರ್ನಾಟಕ ಚೆಸ್ ಅಕಾಡೆಮಿಯಲ್ಲಿ ಬಿ ಎಸ್ ಶಿವಾನಂದ ನಡೆಸುತ್ತಿರುವ ಕೋಚಿಂಗ್ ಸೆಂಟರ್ಗೆ ಸೇರಿಸಿದೆವು ಎನ್ನುತ್ತಾರೆ ಕುಮಾರ್. ಚಾರ್ವಿಯ ಮೊದಲ ಅಧಿಕೃತ ಗೆಲುವು ತನ್ನ ಅಧಿಕೃತ ತರಬೇತಿಯ ಆರು ತಿಂಗಳ ನಂತರ ಕರ್ನಾಟಕ ರಾಜ್ಯ ಶಾಲಾ ಚೆಸ್ ಚಾಂಪಿಯನ್ಶಿಪ್ ನ್ನು ಗೆದ್ದುಕೊಂಡಿದ್ದು. ತರುವಾಯ, ರಾಷ್ಟ್ರೀಯ ಚೆಸ್ ಚಾಂಪಿಯನ್ಶಿಪ್ ಮತ್ತು ಏಷ್ಯನ್ ಸ್ಕೂಲ್ ಚೆಸ್ ಪಂದ್ಯಾವಳಿಯನ್ನು ಗೆದ್ದಳು.
ಇಲ್ಲಿಯವರೆಗೆ, ಚಾರ್ವಿ ವಿಶ್ವ ಕೆಡೆಟ್ ಚಾಂಪಿಯನ್ಶಿಪ್-೨೦೨೨, ಇಂಡೋನೇಷ್ಯಾದಲ್ಲಿ ನಡೆದ ಏಷ್ಯನ್ ಯೂತ್ ಚೆಸ್ ಚಾಂಪಿಯನ್ಶಿಪ್ ಮತ್ತು ಅಕ್ಟೋಬರ್ ೨೦೨೨ ರಲ್ಲಿ ಶ್ರೀಲಂಕಾದಲ್ಲಿ ಕಾಮನ್ವೆಲ್ತ್ ಯೂತ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಹೆಸರು ದಾಖಲಿಸಿಕೊಂಡಿದ್ದಾಳೆ. ಪ್ರಸ್ತುತ, ಆರ್ಬಿ ರಮೇಶ್ ಅವರಿಂದ ತರಬೇತಿ ಪಡೆಯುತ್ತಿದ್ದಾಳೆ. ಅವರು ಮಾರ್ಗದರ್ಶಕರೂ ಚೆಸ್ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಗ್ನಾನಂದ ಅವರ ಮಾರ್ಗದರ್ಶಕರು ಕೂಡ ಹೌದು. ನಾವು ಪ್ರತಿ ತಿಂಗಳು ಚೆನ್ನೈಗೆ ಒಂದು ವಾರದವರೆಗೆ ಪ್ರಯಾಣಿಸುತ್ತೇವೆ ಅಲ್ಲಿ ರಮೇಶ್ ತರಬೇತಿ ನೀಡುತ್ತಾರೆ. ಚಾರ್ವಿಗೆ ಮಿಶ್ರಾ ಸ್ವಯಂಸ್ (ಭಾರತದ ೬೨ ನೇ ಗ್ರ್ಯಾಂಡ್ ಮಾಸ್ಟರ್) ಅವರಿಂದ ನಿಯಮಿತವಾಗಿ ತರಬೇತಿ ಕೊಡಿಸುತ್ತಿದ್ದೇವೆ ಎನ್ನುತ್ತಾರೆ ಅನಿಲ್ ಕುಮಾರ್.
ಒಂಬತ್ತು ವರ್ಷದ ಬಾಲಕಿ ಬೆಂಗಳೂರಿನ ಹೆಗ್ಡೆ ನಗರದ ಕ್ಯಾಪಿಟಲ್ ಪಬ್ಲಿಕ್ ಸ್ಕೂಲ್ನಲ್ಲಿ ಓದುತ್ತಿದ್ದು, ಮಹಿಳೆಯರಿಗಾಗಿ ವಿಶ್ವ ಕೆಡೆಟ್ ಮಾಸ್ಟರ್ ಪ್ರಶಸ್ತಿಯನ್ನು ಪಡೆದುಕೊಳ್ಳುವುದು ಮತ್ತು ಗ್ರ್ಯಾಂಡ್ಮಾಸ್ಟರ್ ಆಗುವುದು ತನ್ನ ಮುಂದಿನ ಗುರಿಯಾಗಿದೆ ಎನ್ನುತ್ತಾಳೆ. ಚಾರ್ವಿಗೆ ಚೆಸ್ ಜೊತೆಗೆ ಬ್ಯಾಡ್ಮಿಂಟನ್ ಮತ್ತು ಈಜು ಕಲಿಕೆಯಲ್ಲಿ ಆಸಕ್ತಿ ಇದೆ.
ದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಬಾಲ ಪುರಸ್ಕಾರವನ್ನು ಗೆದ್ದ ನಂತರ ಚಾರ್ವಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾಳೆ, ನಾಡಿದ್ದು ೨೬ರಂದು ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನ ಬಂದಿದೆ.