ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಜ,೨೪: ಎಐಸಿಸಿ ಮುಖಂಡ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೊ `ನ್ಯಾಯ್’ ಯಾತ್ರೆಗೆ ಅಡ್ಡಿಪಡಿಸಿರುವುದನ್ನು ಖಂಡಿಸಿ ನಗರದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಕೇಂದ್ರ ಮತ್ತು ಅಸ್ಸಾಂ ಬಿಜೆಪಿ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿದರು. ರಾಹುಲ್ ಗಾಂಧಿ ಯಾತ್ರೆಗೆ ಅಡ್ಡಿಪಡಿಸಿರುವ ಬಿಜೆಪಿ ಕಾರ್ಯಕರ್ತರ ವಿರುದ್ಧ ಅಸ್ಸಾಂ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎಐಸಿಸಿ ಮುಖಂಡ ರಾಹುಲ್ ಗಾಂಧಿಯವರು, ಕಳೆದ ವರ್ಷ ಜನಾಂಗೀಯ ಗಲಭೆ ನಡೆದಿದ್ದ ಮಣಿಪುರದಲ್ಲಿ ಕಳೆದ ವಾರವಷ್ಟೇ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಚಾಲನೆ ನೀಡಿದ್ದರು. ಆದರೆ, ಅಸ್ಸಾಂ ರಾಜ್ಯದ ಬಿಜೆಪಿ ಸರ್ಕಾರ, ನ್ಯಾಯ್ ಯಾತ್ರೆಗೆ ಅನುಮತಿ ನೀಡದೆ, ಅಲ್ಲಿನ ಬಿಜೆಪಿ ಕಾರ್ಯಕರ್ತರು ಯಾತ್ರೆಯ ಮೇಲೆ ದಾಳಿ ಮಾಡಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪಾಲಿಕೆ ಸದಸ್ಯ ಎಂ.ಪ್ರಭAಜನ್ ಕುಮಾರ್, ಭಾರತವನ್ನು ಅಧಿಕಾರಕ್ಕಾಗಿ ಬಿಜೆಪಿ ವಿಭಜನೆ ಮಾಡುತ್ತಿದ್ದರೆ, ಕಾಂಗ್ರೆಸ್ ದೇಶದ ಐಕ್ಯತೆ ಮೂಡಿಸುವ ಕೆಲಸ ಮಾಡುತ್ತಿದೆ. ದೇಶದ ಸಂವಿಧಾನವನ್ನು ಉಳಿಸಿಕೊಂಡು ಈವರೆಗೆ ಬಂದಿದ್ದೇವೆ. ದೇಶದ ಜನರ ಸಮಸ್ಯೆಗೆ ಕೇಂದ್ರ ಸರ್ಕಾರ ಕಣ್ಣಿದ್ದೂ ಕುರುಡಾಗಿದೆ. ಜನಾಂಗೀಯ ಗಲಭೆಯಿಂದಾಗಿ ಮಣಿಪುರ ಹೊತ್ತಿ ಉರಿಯುವಾಗ ಬಿಜೆಪಿ ನಾಯಕರು ಹೋಗಿಲ್ಲ ಎಂದು ಆರೋಪಿಸಿದ್ದಾರೆ.
ಕೆಪಿಸಿಸಿ ಮಾಧ್ಯಮ ವಕ್ತಾರ ವೆಂಕಟೇಶ್ ಮಾತನಾಡಿ, ರಾಹುಲ್ ಗಾಂಧಿ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಅಸ್ಸಾಂ ರಾಜ್ಯದಲ್ಲಿ ನ್ಯಾಯ್ ಯಾತ್ರೆಗೆ ಅಡ್ಡಿಪಡಿಸಿರುವ ಘಟನೆಯಿಂದ ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು. ನ್ಯಾಯ್ ಯಾತ್ರೆಯಿಂದ ಬಿಜೆಪಿಗೆ ಹೆದರಿಕೆ ಬಂದಿದೆ. ಆ ಕಾರಣಕ್ಕಾಗಿ ತೊಂದರೆ ಕೊಡುತ್ತಿದೆ ಎಂದು ಆಪಾದಿಸಿದ್ದಾರೆ. ಇದಕ್ಕೂ ಮುನ್ನ ಹಿರಿಯ ಮುಖಂಡ ಕಲ್ಲುಕಂಬ ಪಂಪಾಪತಿ, ಮೇಯರ್ ಬಿ.ಶ್ವೇತಾ ಸೇರಿ ಹಲವರು ಮಾತನಾಡಿದರು.
ಪ್ರತಿಭಟನೆಯಲ್ಲಿ ಉಪಮೇಯರ್ ಬಿ.ಜಾನಕಿ, ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು, ಸದಸ್ಯರಾದ ಶ್ರೀನಿವಾಸ್ ಮಿಂಚು, ಕುಬೇರಾ, ನೂರ್, ಮುಖಂಡರಾದ ಶಿವರಾಜ್, ಪಾಟೀಲ್, ಧರ್ಮ, ನರೇಂದ್ರ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಇದ್ದರು.