ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಜ,೨೪: ಲಿಂಗ ತಾರತಮ್ಯ ನಿವಾರಣೆ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ ಕೂಡ ಹೆಣ್ಣು ಭ್ರೂಣ ಹತ್ಯೆ ಸದ್ದಿಲ್ಲದೇ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಬೇಟಿ ಬಚಾವೋ, ಬೇಟಿ ಫಡಾವೋ(ಮಗಳನ್ನು ಉಳಿಸಿ, ಮಗಳಿಗೆ ಶಿಕ್ಷಣ ನೀಡಿ) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದರೂ ಕೂಡ, ಹೆಣ್ಣನ್ನು ಗಂಡು ಮಗುವಿನ ರೀತಿಯಲ್ಲಿ ನೋಡದೆ ಇರುವುದು ಇಂದಿನ ಕಳವಳಕ್ಕೆ ಕಾರಣವಾಗಿದೆ.
೨೦೨೧ನೇ ಗಣತಿ ವೇಳೆಗೆ ಪ್ರತಿ ಸಾವಿರ ಗಂಡು ಮಕ್ಕಳಿಗೆ ಒಂಭತ್ತು ನೂರು ಹೆಣ್ಣು ಮಕ್ಕಳಾಗಬಹುದು ಎಂದು ವರದಿ ಹೇಳುತ್ತಿದೆ.
ಇದರ ನಿವಾರಣೆಗೆ ಹೆಣ್ಣು ಮಕ್ಕಳಿಗೆ ನಿಧಿ ನಿರ್ಮಿಸಲು ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೆ ತಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಹೆಣ್ಣು ಮಕ್ಕಳ ರಕ್ಷಣೆಗಾಗಿ ಶ್ರಮಿಸುತ್ತಿವೆ.ಆದ್ದರಿಂದ ವಿದ್ಯಾರ್ಥಿನೀಯರು ಶಾಲೆಯಲ್ಲಿ ಶಿಕ್ಷಕರು ಹೇಳಿದ ಪಾಠ ಹಾಗೂ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ಓದಿ,ಉದ್ಯೋಗ ಪಡೆಯಬೇಕೆಂದು ಹೇಳಿದರು. ಅಂಗನವಾಡಿ ಕಾರ್ಯಕರ್ತೆಯರಾದ ಪದ್ಮಾವತಿ, ಶ್ರೀದೇವಿ ಹಾಗೂ ನಿಂಗಮ್ಮ ಮುಂತಾದವರು ಉಪಸ್ಥಿತರಿದ್ದರು.