ಹಾವೇರಿ(ಜ.27): ಹಾನಗಲ್ಲ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೊಲೀಸರು ದಕ್ಷತೆಯಿಂದ ಕೆಲಸ ನಿರ್ವಹಿಸಿದ್ದು, 19 ಆರೋಪಿಗಳನ್ನು ಬಂಧಿಸಿದ್ದಾರೆ. ಯಾರೇ ಅಪರಾಧಿ ಆಗಿದ್ದರೂ ಕ್ರಮ ಕೈಗೊಂಡು ಸಂತ್ರಸ್ತೆಗೆ ಪರಿಹಾರ ಮತ್ತು ನ್ಯಾಯ ಕೊಡಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ಯಾಂಗ್ ರೇಪ್ ವಿಷಯವನ್ನು ಮಾಧ್ಯಮದವರು ಸೆನ್ಸೆಟಿವ್ (ಸೂಕ್ಷ್ಮ) ಮಾಡುತ್ತಿದ್ದಾರೆ. ಯಾವ ಲಾಡ್ಜ್ನಲ್ಲಿ ಘಟನೆ ಆಯ್ತು ಎನ್ನೋದು ಗೊತ್ತಿದೆ. ಲಾಡ್ಜ್ ಮಾಲೀಕರೇ ಕಂಪ್ಲೇಂಟ್ ಕೊಡಬಹುದಾಗಿತ್ತು. ಈಗ ಹೋಟೆಲ್ ಮಾಲೀಕರು ಅಪರಾಧಿ ಸ್ಥಾನದಲ್ಲಿದ್ದಾರೆ. ಅದನ್ನು ತನಿಖೆ ಮಾಡಿಸುತ್ತೇವೆ. ನೈತಿಕ ಪೊಲೀಸ್ಗಿರಿ ಯಾರೇ ಮಾಡಿದ್ರೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಲೋಕಸಭಾ ಚುನಾವಣೆ ಆಕಾಂಕ್ಷಿಗಳ ಕುರಿತು ಪ್ರತಿಕ್ರಿಯಿಸಿ, ಹಾವೇರಿ-ಗದಗ ಲೋಕಸಭಾ ಕ್ಷೇತ್ರಕ್ಕೆ ಹಲವರು ಆಕಾಂಕ್ಷಿಗಳಿದ್ದು ಅರ್ಜಿ ಸಲ್ಲಿಸಿದ್ದಾರೆ. ಅವುಗಳನ್ನು ಪರಿಶೀಲನೆ ನಡೆಸಿದ್ದೇವೆ ಎಂದ ಅವರು, ಸಕ್ಕರೆ ಕಾರ್ಖಾನೆಯವರು ಎಫ್ಆರ್ಪಿ ಪ್ರಕಾರವೇ ರೈತರಿಗೆ ಹಣ ನೀಡುತ್ತಿದ್ದಾರೆ. ಸಮಸ್ಯೆಯಾಗಿದ್ದರೆ ಅದನ್ನು ತನಿಖೆ ಮಾಡಿಸುತ್ತೇವೆ ಎಂದರು