ಗಂಗಾವತಿ. ಜ.27: ಕೊಪ್ಪಳ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಜಯ್ಕುಮಾರ ಕಳೆದ ೬ ತಿಂಗಳಿಂದ ಗಂಗಾವತಿ, ಕುಷ್ಟಗಿ ಜಿಲ್ಲಾ ಪಂಚಾಯಿತಿ ಉಪ ವಿಭಾಗಗಳಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾಮಗಾರಿ ಹಂಚಿಕೆ ವಿಷಯದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದು, ಹಣ ನೀಡಿದವರಿಗೆ ಮಾತ್ರ ಏಳೇಂಟು ಕಾಮಗಾರಿಗಳಿಗೆ ಒಪ್ಪಂದದೊಂದಿಗೆ ತುಂಡು ಗುತ್ತಿಗೆ ಕಾಮಗಾರಿಗಳನ್ನು ನೀಡುತ್ತಿದ್ದಾರೆ ಎಂದು ಬಹುಜನ ಸಮಾಜ ಪಾರ್ಟಿಯ ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ್ ಸಿದ್ದಾಪುರ ಆರೋಪಿಸಿದ್ದಾರೆ.
ಈ ಕುರಿತಂತೆ ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ನೀಡಿರುವ ಶಂಕರ ಸಿದ್ದಾಪುರ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಶಿಫಾರಸ್ಸಿನಿಂದ ಮತ್ತೆ ಕೊಪ್ಪಳ ಜಿಲ್ಲೆಗೆ ವಕ್ಕರಿಸಿದ್ದು, ವ್ಯಾಪಕ ಭ್ರಷ್ಟಚಾರದಲ್ಲಿ ತೊಡಗಿದ್ದಾರೆ. ಜನಸಂಪರ್ಕದಿಂದ ದೂರವಿರುವ ವಿಜಯ್ಕುಮಾರ ಗುತ್ತಿಗೆದಾರರ ಕೈಗೂ ಸಿಗುತ್ತಿಲ್ಲ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕೃಪೆಯಿಂದ ನಾಲ್ಕು ಇಲಾಖೆಗಳಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಯಾವೊಂದೂ ಕಚೇರಿಯಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಏಕ ವ್ಯಕ್ತಿಗೆ ನಾಲ್ಕು ಹುದ್ದೆಗಳನ್ನು ನೀಡಿದ್ದು, ಎಷ್ಟರಮಟ್ಟಿಗೆ ಸರಿ ಎಂಬುವುದು ಇಲಾಖೆ ವ್ಯಾಪ್ತಿಯಲ್ಲಿಯೇ ಚರ್ಚೆಗೀಡಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಒಬ್ಬ ವ್ಯಕ್ತಿಗೆ ನಾಲ್ಕು ಹುದ್ದೆಗಳನ್ನು ನೀಡುವ ಮೂಲಕ ಸಚಿವರು, ಶಾಸಕರು ಹಾಗೂ ಮೇಲಾಧಿಕಾರಿಗಳು ಪರೋಕ್ಷವಾಗಿ ಭ್ರಷ್ಟಚಾರಕ್ಕೆ ಬೆಂಬಲ ನೀಡಿದಂತಾಗಿದೆ. ಇವರೆಲ್ಲರ ಕೃಪೆಯಿಂದಾಗಿ ಅಧಿಕೃತ ಪರವಾನಿಗೆ ಪಡೆದವರಂತೆ ವಿಜಯ್ಕುಮಾರ ಉದ್ಧಟತನದಿಂದ ಮೆರೆಯುತ್ತಿದ್ದು, ಈ ಹಿಂದಿನಂತೆ ಬೋಗಸ್ ಬಿಲ್ಲುಗಳನ್ನು ಸೃಷ್ಠಿಸುತ್ತಾ ಬೊಕ್ಕಸ ಲೂಟಿ ಮಾಡುತ್ತಿದ್ದಾರೆ. ಕಿರಿಯ ಅಭಿಯಂತರರಿಗೆ ಇಲಾಖೆಯ ಯಾವುದೇ ಜವಾಬ್ದಾರಿಗಳನ್ನು ಒಪ್ಪಿಸದೇ ವಿಜಯ್ಕುಮಾರ ಏಕವ್ಯಕ್ತಿಯಾಗಿ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಕಿರಿಯ ಅಭಿಯಂತರರಿಗೆ ಕೆಲಸವಿಲ್ಲದಂತಾಗಿ ಖಾಲಿ ಕುಳಿತುಕೊಳ್ಳುವಂತಾಗಿದೆಹೀಗಾಗಿ ತಾಲೂಕಿನಾದ್ಯಂತ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ. ಗಂಗಾವತಿ ವಿಧಾನಸಭಾ ಕ್ಷೇತ್ರ ಸಮಗ್ರ ಅಭಿವೃದ್ಧಿಯ ಕನಸು ಹೊತ್ತಿರುವ ಶಾಸಕ ಗಾಲಿ ಜನಾರ್ಧನ ರೆಡ್ಡಿಯವರು ಇಂತಹ ಅಧಿಕಾರಿಗಳಿಂದ ಯಾವ ಅಭಿವೃದ್ಧಿಯೂ ಸಾಧಿಸಲು ಸಾಧ್ಯವಿಲ್ಲ. ಕೂಡಲೇ ಈತನಿಗೆ ನೀಡಿರುವ ಹೆಚ್ಚುವರಿ ಹುದ್ದೆಯನ್ನು ಹಿಂಪಡೆದು ಗಂಗಾವತಿ ಅಥವಾ ಕುಷ್ಟಗಿ ತಾಲೂಕಿನ ಯಾವುದಾದರೂ ಒಂದು ಉಪವಿಭಾಗ ಕಚೇರಿಗೆ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ನೇಮಿಸಬೇಕು. ಕಳೆದ ೬ ತಿಂಗಳುಗಳಿಂದ ಖಾಲಿ ಕುಳಿತಿರುವ ಅಧಿಕಾರಿಗಳಿಗೆ ಉಳಿದ ಇಲಾಖೆಗಳಿಗೆ ನೇಮಿಸಬೇಕು. ಹಾಗೂ ಕಳೆದ ೬ ತಿಂಗಳಲ್ಲಿ ಅನುಮೋದನೆಗೊಂಡಿರುವ ಮತ್ತು ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಬೇಕು. ಸೂಕ್ತ ತನಿಖೆ ನಡೆಸಿ ಅಗತ್ಯಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಬಹುಜನ ಸಮಾಜ ಪಾರ್ಟಿ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಧರಣಿಸತ್ಯಾಗ್ರಹ ನಡೆಸುವುದಾಗಿ ಬಹುಜನ ಸಮಾಜವಾದಿ ಪಾರ್ಟಿ ಕೊಪ್ಪಳ ಪ್ರಧಾನ ಕಾರ್ಯದರ್ಶಿ ಶಂಕರ ಸಿದ್ದಾಪುರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.