ನವದೆಹಲಿ: ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಶುಕ್ರವಾರ ಆರಂಭವಾಗಿದ್ದು, ಅಧಿವೇಶನದಲ್ಲಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರ ʼಪ್ರತ್ಯೇಕ ರಾಷ್ಟ್ರ ಹೇಳಿಕೆʼಯು ತೀವ್ರ ಗದ್ದಲವೆಬ್ಬಿಸಿದೆ. ನಾಯಕನ ಹೇಳಿಕೆ ಸಂಬಂಧ ಕಾಂಗ್ರೆಸ್ ಕ್ಷಮೆಯಾಚನೆ ಮಾಡಬೇಕೆಂದು ಆಡಳಿರೂಢ ಪಕ್ಷದ ನಾಯಕರು ಆಗ್ರಹಿಸುತ್ತಿದ್ದಾರೆ.
ಡಿಕೆ ಸುರೇಶ್ ಹೇಳಿಕೆ ಬಗ್ಗೆ ಸಭಾನಾಯಕ ಪಿಯೂಶ್ ಗೋಯಲ್ ಇಂದು ರಾಜ್ಯಸಭೆಯಲ್ಲಿ ಪ್ರಸ್ತಾಪ ಮಾಡಿದರು. ಜೊತೆಗೆ ಕಾಂಗ್ರೆಸ್ ಪಕ್ಷ ಈ ಬಗ್ಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ವಿರೋಧ ಪಕ್ಷದ ನಾಯಕರು, ಅದೇ ಪಕ್ಷದ ನಾಯಕರು ಸುರೇಶ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿಲ್ಲ. ಕರ್ನಾಟಕದ ಡಿಸಿಎಂ ಸಹೋದರ ಹಾಗೂ ಸಂಸದರಾಗಿರುವ ಸುರೇಶ್ ಅವರು ದೇಶ ಕ್ಷಮೆ ಕೇಳುವಂತೆ ಒತ್ತಾಯಿಸಿದರು.
ಲೋಕಸಭೆ ಸಂಸದರಾಗಿ ಈ ದೇಶವನ್ನು ಒಡೆಯುವ ಮಾತನಾಡಿದ್ದಾರೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ದೇಶದ ಏಕತೆ ಮತ್ತು ಸಾರ್ವಭೌಮತ್ವದ ಮುಂದೆ ಯಾವುದೂ ಇಲ್ಲ ಎಂದು ಹೇಳಬೇಕು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಆಕ್ಷೇಪ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿ, ಯಾರಾದರೂ ದೇಶ ಒಡೆಯುವ ಬಗ್ಗೆ ಮಾತನಾಡಿದರೆ ನಾವು ಅದನ್ನು ಎಂದಿಗೂ ಸಹಿಸುವುದಿಲ್ಲ. ಅವರು ಯಾವುದೇ ಪಕ್ಷದವರಾಗಿರಲಿ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಾವು ಒಂದೇ. ಭಾರತ ಅಖಂಡವಾಗಿರಲಿದೆ ಎಂದರು.
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಡಿಕೆ.ಸುರೇಶ್ ಅವರು, ದೆಹಲಿಯಲ್ಲಿ ಕೇಂದ್ರ ವಿತ್ತ ಸಚವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದರು.
ಇಂದಿನ ಬಜೆಟ್ನಲ್ಲಿ ಹೊಸತೇನು ಇಲ್ಲ. ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಇಂದು ನಮ್ಮ ಗ್ಯಾರಂಟಿಗಳನ್ನು ವಿರೋಧ ಮಾಡಿದಂತವರು ಗ್ಯಾರಂಟಿ ಹೆಸರಿನಲ್ಲಿ ಚುನಾವಣೆಗೆ ಹೊರಟಿದ್ದಾರೆ. ದಕ್ಷಿಣ ಭಾರತದ ಹಣವನ್ನ ಉತ್ತರ ಭಾರತಕ್ಕೆ ಬಿಡುತ್ತಿದ್ದಾರೆ. ಇದರಿಂದ ನಮಗೆ ಆರ್ಥಿಕ ತೊಂದರೆಯಾಗುತ್ತಿದೆ. ಹೀಗೆ ಮುಂದುವರಿದರೆ ಪ್ರತ್ಯೇಕ ದೇಶ ಕೇಳಬೇಕಾಗುತ್ತದೆ ಎಂದು ಹೇಳಿದ್ದರು.