ಹುಬ್ಬಳ್ಳಿ (ಫೆ.02): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಇದೇ ವೇಳೆ ಸಂಸದ ಡಿ.ಕೆ. ಸುರೇಶ ದೇಶವನ್ನು ತುಂಡರಿಸುವ ಮಾತನಾಡಿದ್ದಾರೆ. ಕಾಂಗ್ರೆಸ್ಗೆ ಧೈರ್ಯ, ಮಾನ-ಮರ್ಯಾದೆ ಇದ್ದರೆ ಅವರನ್ನು ಪಕ್ಷದಿಂದ ಅಮಾನತು ಮಾಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ದೇಶವನ್ನು ತುಂಡರಿಸುವ ಮೂಲಕ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ದಕ್ಷಿಣ ಭಾರತ ರಾಷ್ಟ್ರರಚಿಸಬೇಕೆಂದು ಸಂಸದ ಡಿ.ಕೆ. ಸುರೇಶ್ ಹೇಳಿಕೆ ನೀಡಿರುವುದು ದೇಶದ್ರೋಹದ ಕೆಲಸ ಎಂದರು.
ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಎಂದು ಹೇಳಿರುವ ರಾಷ್ಟ್ರ ಕವಿಗೆ ಮಾಡಿರುವ ಅವಮಾನ ವಾಗಿದೆ. ಸಂಸದ ಸುರೇಶ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ಯಾರೇ ಆದರೂ ದೇಶದೊಂದಿಗೆ ಭಾವನಾತ್ಮಕ ಸಂಬಂಧಹೊಂದಿರಬೇಕು. ತುಂಡರಿಸುವ ಮಾತನಾಡಬಾರದು. ನಾವು ಅಧಿಕಾರದಲ್ಲಿ ಇಲ್ಲದಾಗ ಹೀಗೆ ಮಾತನಾಡಿರಲಿಲ್ಲ. ಕಾಂಗ್ರೆಸ್ ಗ್ಯಾರಂಟಿ ಬೋಗಸ್ ಆಗಿದೆ. ದೇಶದ ಭದ್ರತೆ, ಸುರಕ್ಷತೆಗೆ ಮೋದಿಯೇ ಗ್ಯಾರಂಟಿ. ದೇಶದ 25 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲಕ್ಕೆ ಎತ್ತಿದ್ದೇವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಇತ್ತೀಚಿನ ತನ್ನ ವರದಿಯಲ್ಲಿ ಹೇಳಿದೆ ಎಂದು ತಿಳಿಸಿದರು.
ಶೆಟ್ಟರ್ ಸೇರ್ಪಡೆ ನನಗೆ ಸಂತೋಷ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಿಜೆಪಿಗೆ ಮರಳಿ ಬಂದಿರುವುದು ಸಂತಸವಾಗಿದೆ. ಆವತ್ತು ನನಗೆ ದೊಡ್ಡವರ ಜತೆಗೆ ಮೀಟಿಂಗ್ ಇದ್ದ ಕಾರಣ ಸೇರ್ಪಡೆ ಕಾರ್ಯಕ್ರಮಕ್ಕೆ ಹೋಗುವುದಕ್ಕೆ ಆಗಲಿಲ್ಲವಷ್ಟೇ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಇದೇ ವೇಳೆ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ತಾವೇ ಅಭ್ಯರ್ಥಿ ಎಂದು ತಿಳಿಸಿದರು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಮರಳಿ ಬಂದಿರುವುದು ನನಗೆ ಬಹಳ ಖುಷಿಯಾಗಿದೆ. ಶೆಟ್ಟರ್ ಸೇರ್ಪಡೆ ಬಗ್ಗೆ ನನಗೆ ಯಾವುದೇ ಬಗೆಯ ವಿರೋಧ ಇಲ್ಲ. ವಿರೋಧ ಏನಾದರೂ ಇದ್ದರೆ ನಿಮಗೆ ತಿಳಿಸುತ್ತಿದ್ದೆ ಎಂದರು.
ನಾನು ಆರು ತಿಂಗಳ ಹಿಂದೆಯೇ ಶೆಟ್ಟರ್ ಅವರು ವಾಪಸ್ ಬರುತ್ತಾರೆ ಎಂದು ಹೇಳಿದ್ದೆ. ನನಗೆ ಶೆಟ್ಟರ್ ಬಂದಿರುವುದು ಸಂತೋಷ. ಇವತ್ತು ಕಾರ್ಯಕಾರಿಣಿಯಲ್ಲಿ ಶೆಟ್ಟರ್ ಸಿಕ್ಕಿದ್ದರು ಅವರಿಗೆ ವೆಲಕಂ ಬ್ಯಾಕ್ ಎಂದು ಹೇಳಿದ್ದೇನೆ ಎಂದರು. ಈ ಬಗ್ಗೆ ಸ್ಥಳೀಯ ನಾಯಕರಿಗೆ ಮಾಹಿತಿ ಇತ್ತು. ಮಾಹಿತಿ ಇರಲಿಲ್ಲ ಎಂದು ಭಾವಿಸುವುದು ತಪ್ಪು. ಅವತ್ತು ನಾನು ದೆಹಲಿಯಲ್ಲೇ ಇದ್ದೆ. ಶಾಸಕ ಅರವಿಂದ ಬೆಲ್ಲದ ನನ್ನ ಜೊತೆಗೆ ಇರಲಿಲ್ಲ. ಆದರೆ ಹಿಂದಿನ ದಿನ ಬೆಲ್ಲದ ಜೊತೆಗಿದ್ದರು ಎಂದರು.
ನಮಗೆ ಲಿಂಗಾಯತ ಸೇರಿದಂತೆ ಎಲ್ಲರೂ ಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಲಕ್ಷ್ಮಣ ಸವದಿ ಅವರಲ್ಲೂ ನಮ್ಮ ವೈಚಾರಿಕತೆ ರಕ್ತ ಇದೆ. ಅವರು ಬಂದರೂ ಸ್ವಾಗತಿಸುತ್ತೇವೆ ಎಂದು ತಿಳಿಸಿದರು. ಶಾಸಕ ಗಾಲಿ ಜನಾರ್ದನ ರೆಡ್ಡಿ ಕೂಡ ಓರಿಜನಲ್ ಬಿಜೆಪಿಯವರು, ಅವರೂ ಬರಬಹುದು ಎಂದು ನುಡಿದರು. ನಾವು ಈ ಬಾರಿ 28ಕ್ಕೆ 28 ಸ್ಥಾನಗಳನ್ನು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬೇಕು. ಅದಕ್ಕೆ ಬೇಕಾದ ತಯಾರಿ ನಡೆಸುತ್ತಿದ್ದೇವೆ ಎಂದರು.