ಹೊಸಪೇಟೆ(ವಿಜಯನಗರ).ಫೆಬ್ರವರಿ.02 : ಹಂಪಿ ಉತ್ಸವದ ಇತಿಹಾಸ, ವಿಜಯನಗರ ಸಾಮ್ರಾಜ್ಯದ ಗತವೈಭವ ಹಾಗೂ ನಾಡಿನ ಸಾಂಸ್ಕೃತಿಕ ವೈವಿಧ್ಯತೆಯನ್ನು ಗಾಯಿತ್ರಿ ಪೀಠದ ವೇದಿಕೆಯ ಮೇಲೆ ಮರುಕಳಿಸುವಂತೆ ಹಂಪಿ ಉತ್ಸವ-2024 ಮೊದಲ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಮೃತ ಹಸ್ತದಿಂದ ಉತ್ಸವಕ್ಕೆ ಚಾಲನೆ ದೊರೆತ ನಂತರ, ಶುಕ್ರವಾರ ಮುಖ್ಯವೇದಿಕೆಯಲ್ಲಿ, ಸಂಗೀತ ನಿರ್ದೇಶಕ ಸಾಧುಕೋಕಲ ತಂಡದಿಂದ ರಸಮಂಜರಿ ಪ್ರಸ್ತುತ ಪಡಿಸಿದರು.
ಸಾಧುಕೋಕಿಲ ತಂಡದ ಸಂಗೀತ ಸಂಯೋಜಕ ಪವೀಣ್ ಡಿ ರಾವ್ ಸಂಯೋಜಿಸಿದ ಹಂಪಿ ಉತ್ಸವ ಗೀತೆ ಗಾಯನಕ್ಕೆ ಕಲಾವಿದರು ನೃತ್ಯ ರೂಪಕ ಪ್ರದರ್ಶಿಸಿದರು. ಪ್ರೇಕ್ಷಕರು ಕರತಾಡನದಿಂದ ಸಂತಸ ವ್ಯಕ್ತಪಡಿಸಿದರು. ಸಂಗೀತ ಮಾಂತ್ರಿಕ ಸಾಧುಕೋಕಿಲ ಹಂಪಿ ಉತ್ಸವಕ್ಕೆ ಈ ಗೀತ ಸಂಯೋಜನೆ ರಾಷ್ಟ್ರಗೀತೆ ಇದ್ದಂತೆ ಎಂದು ಪ್ರಶಂಸೆ ವ್ಯಕ್ತಪಿಡಿದರು. ಪವೀಣ್ ಡಿ ರಾವ್ ಅನುಪಸ್ಥತಿಯಲ್ಲಿ ಅವರ ಕಲಾತಂಡಕ್ಕೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ವೇಣು ವಾದನಗಳ ಸಮ್ಮಿಳನದ ಸಂಗೀತ ಸಂಯೋಜನೆ
ಖ್ಯಾತ ಕೊಳಲು ವಾದಕ ಪಂಡಿತ ಪ್ರವೀಣ್ ಗೋಳ್ಕಿಂಡಿ ನೇತೃತ್ವದ 22 ಕಲಾವಿದರು, ಸಪ್ತ ಸ್ವರಗಳನ್ನು ಪ್ರತಿನಿಧಿಸುವ ವೇಣು ವಾದನದ ಸಮ್ಮಿಳದ ಸಂಗೀತ ಸಂಯೋಜನೆ ಕಾರ್ಯಕ್ರಮವನ್ನು ವೇದಿಕೆಯಲ್ಲಿ ಪ್ರಸ್ತುತ ಪಡಿಸಿದರು.
ಕೊಳಲು ವಾದಕರ ಶಿಸ್ತುಬದ್ದ ಮಧುರ ವೇಣು ವಾದನದ ಸಂಯೋಜನೆ ಹಾಗೂ ಗಾಯಕರ ಸಪ್ತಸ್ವರದ ಗಾಯನ, ಹಂಪಿಯ ಕಲ್ಲು ಬಂಡೆಗಳಲ್ಲಿ ಪ್ರತಿಧ್ವನಿಸಿ, ತುಂಗಾ ನದಿಯ ಜುಳು ಜುಳು ಕಲರವದಲ್ಲಿ ಮಿಂದು, ಪಂಪಾಪತಿ ವಿರೂಪಾಕ್ಷನ ಪದತಲಕ್ಕೆ ಎರೆಗಿತು. ಸುಂದರ ಲಲನೆಯರು ಸಂಗೀತಕ್ಕೆ ಶಾಸ್ತ್ರೀಯ ನೃತ್ಯ ಪ್ರಕಾರಗಳಾದ ಭರತನಾಟ್ಯ, ಕೂಚುಪುಡಿ, ಯಕ್ಷಗಾನ ಹಾಗೂ ಪಾಶ್ವಿಮಾತ್ಯ ನೃತ್ಯಗಳನ್ನು ಮಾಡಿದರು. ಸಭಿಕರು ಮಂತ್ರಮುಗ್ಧರಾದರು. ಅಪರ ಜಿಲ್ಲಾಧಿಕಾರಿ ಅನುರಾಧ ತಂಡವನ್ನು ಸನ್ಮಾನಿಸಿದರು.
ಚುಮುಚಮು ಚಳಿಗೆ ಗಿಚ್ಚಿಗಿಲಿ ಕಚಗುಳಿ
ಕನ್ನಡ ಪ್ರಖ್ಯಾತ ವಾಹಿನಿ ಕಲರ್ಸ್ ಕನ್ನಡದ ಗಿಚ್ಚಿಗಿಲಿ ತಂಡ ಹಂಪಿ ಉತ್ಸವ ಕಂಣ್ತುಂಬಿಕೊಳ್ಳಲು ನೆರದ ಪ್ರಕ್ಷಕರಿಗೆ ಚುಮುಚಮು ಚಳಿಯ ನುಡುವೆ ಹಾಸ್ಯದ ಕಚಗುಳಿ ನೀಡಿತು.
ಬೆಂಗಳೂರಿನ ಡ್ರೀಮ್ಸ್ ಈವೆಟ್ಸ್ ಅ್ಯಂಡ್ ಫಾಷನ್ ತಂಡ ರಂಗಿತರಂಗ, ಉಳಿದವರು ಕಂಡಂತೆ ಹಾಗೂ ಕಾಂತಾರ ಚಲನಚಿತ್ರ ಗೀತೆಗಳ ಒಟ್ಟು ಸಮ್ಮಿಳನದ ನೃತ್ಯವನ್ನು ಪ್ರಸ್ತುತ ಪಡಿಸಿ, ಕ್ಷಣಕಾಲ ಪ್ರೇಕ್ಷಕರಿಗೆ ಮಧ್ಯರಾತ್ರಿ ಕತ್ತಲ್ಲಿನಲ್ಲಿ ರೋಮಾಂಚನ ಉಂಟುಮಾಡಿದರು. ತಹಶೀಲ್ದಾರ್ ವಿಶ್ವಜಿತ್ ಮೆಹ್ತಾ ಹಾಗೂ ಶ್ವೇತ ಕಲಾವಿದರನ್ನು ಸನ್ಮಾನಿಸಿದರು.
ಸಂದೀಪ್ ವಶಿಷ್ಠ ತಂಡ ವೀಣಾ ( ಸಿತಾರ) ವಾದನ ಸಿಂಪೋನಿ ರಾತ್ರಿ ತಂಗಾಳಿಯಂತೆ ಪ್ರೇಕ್ಷರ ಕವಿಯಲ್ಲಿ ನುಸುಳಿ ಮಿಡಿಯಿತು. ವೀಣಾ ವಾದನದ ಜೊತೆಗೆ ಆರಂಭದಲ್ಲಿ ಕಲಾವಿದರು ದೈವಭಕ್ತಿ ಮೇಳಿಸುವಂತೆ ನೃತ್ಯ ಪ್ರದರ್ಶಸಿದರು. ನಂತರ ವಿಜಯನಗರ ಅರಸರ ಆಸ್ಥಾನದ ಗಾಂಭೀರ್ಯತೆ ಸಭಿಕರಲ್ಲಿ ಮೂಡುವಂತೆ ಭರತನಾಟ್ಯದೊಂದಿಗೆ ವೀಣಾ ವಾದನ ಮೂಡಿಬಂದಿತು. ಇದಕ್ಕೆ ತಬಲ, ಕೊಳಲು, ಕೀಬೋರ್ಡ್, ವೈಯಲಿನ್ ಕಲಾವಿದರು ಸಾಥ್ ನೀಡಿದರು. ಕೊನೆಯಲ್ಲಿ ಬಣ್ಣದ ಹಬ್ಬ ಹೋಳಿ ಸಡಗರ ವೀಣೆಗಳ ತಂತಿಗಳಲ್ಲಿ ಕಂಪಿಸಿತು. ಕಲಾವಿದರಿಗೆ ಉಪವಿಭಾಗಧಿಕಾರಿ ಮಹಮದ್ ಅಕ್ರಂ ಷಾ ಸನ್ಮಾನಿಸಿದರು. ಭಾನುಮತಿ ಹಾಗೂ ಬಸವರಾಜ್.ಕೆ ನಿರೂಪಿಸಿದರು.