ಗೊಡ್ಡಾ (ಜಾರ್ಖಂಡ್): ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಎಲ್ಲಾ ಪಕ್ಷಗಳು ಒಗ್ಗೂಡಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಶನಿವಾರ ಹೇಳಿದ್ದಾರೆ.
ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯಲ್ಲಿ ಪಾಲ್ಗೊಂಡಿರುವ ಜೈರಾಮ್ ರಮೇಶ್ ಅವರು, ಇದೇ ವೇಳೆ ಸುದ್ದಿಗಾರರರೊಂದಿಗೆ ಮಾತನಾಡಿದರು.
ಈ ವೇಳೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನು ಪಡೆಯುತ್ತದೆಯೇ ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಎಲ್ಲರೂ ಒಗ್ಗೂಡಬೇಕು. ಮಮತಾ ಬ್ಯಾನರ್ಜಿಯವರು ಇನ್ನೂ ವಿರೋಧ ಪಕ್ಷದ ಒಕ್ಕೂಡ INDIAದ ಭಾಗವಾಗಿದ್ದಾರೆಂದು ನಂಬಿದ್ದೇವೆಂದು ಹೇಳಿದರು,
ಮಮತಾ ಅವರು ಬಿಜೆಪಿ ವಿರುದ್ಧ ಹೋರಾಡಬೇಕೆಂದು ಬಯಸಿದ್ದಾರೆ. ನಮ್ಮ ಬಯಕೆಯೂ ಅದೇ ಆಗಿದೆ. ಹೀಗಾಗಿ ನಾವೆಲ್ಲರೂ ಒಗ್ಗೂಡಿ ಹೋರಾಡಿದರೆ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.
ಪಾಟ್ನಾ, ಬೆಂಗಳೂರು ಹಾಗೂ ಮುಂಬೈನಲ್ಲಿ ನಡೆದ ಸಭೆಯಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದಲೇ ಇದ್ದೆವು. ಈ ಮಧ್ಯೆ ಏನೋ ಆಗಿರಬಹುದು ಎಂಬ ಭಾವನೆ ಮಾಡುತ್ತಿದೆ. ಶಿವಸೇನೆ, ನಿತೀಶ್ ಕುಮಾರ್ ವಿಪಕ್ಷಗಳ ಮೈತ್ರಿಕೂಡದಿಂದ ದೂರಾದರು. ಇದೀಗ ಮಮತಾ ಅವರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಲೋಕಸಭೆ ಚುನಾವಣೆ ಸ್ಥಳೀಯ ಚುನಾವಣೆಯಂತಲ್ಲ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.