ನವದೆಹಲಿ: ಅಪರಾಧ ತಡೆಯುವ ಬದಲು ನಾಟಕ ಮಾಡುತ್ತಿದ್ದಾರೆಂದು ದೆಹಲಿ ಕ್ರೈಂ ಬ್ರ್ಯಾಂಚ್ ಪೊಲೀಸರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕಿಡಿಕಾರಿದ್ದಾರೆ.
ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರನ್ನು ಖರೀದಿಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಯತ್ನಿಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಲು ಕಳೆದ ಎರಡು ದಿನಗಳಿಂದ ದೆಹಲಿ ಪೊಲೀಸ್ ಅಪರಾಧ ದಳದ ಅಧಿಕಾರಿಗಳು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ,
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್ ಅವರು, ರಾಷ್ಟ್ರ ರಾಜಧಾನಿಯಲ್ಲಿ ಅಪರಾಧಗಳನ್ನು ನಿಲ್ಲಿಸುವ ಬದಲು ರಾಜಕೀಯ ಮಾಸ್ಟರ್ ಗಳ ಸೂಚನೆ ಮೇರೆಗೆ ನಾಟಕ ಮಾಡುತ್ತಿದ್ದಾರೆಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕ್ರೈಂ ಬ್ರ್ಯಾಂಚ್ ಪೊಲೀಸರನ್ನು ನೋಡಿದರೆ ಅಯ್ಯೋ (ಸಹಾನುಭೂತಿ) ಎನಿಸುತ್ತಿದೆ. ಅವರ ತಪ್ಪಾದರೂ ಏನಿದೆ? ದೆಹಲಿಯಲ್ಲಿ ಅಪರಾಧ ತಡೆಯುವುದು ಅವರ ಜವಾಬ್ದಾರಿ. ಆದರೆ, ಅಪರಾಧ ತಡೆಯುವ ಬದಲು ನಾಟಕ ಮಾಡುತ್ತಿದ್ದಾರೆ. ಹೀಗಾಗಿಯೇ ದೆಹಲಿಯಲ್ಲಿ ಅಪರಾಧ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.
ಯಾವ ಯಾವ ಎಎಪಿ ಶಾಸಕರನ್ನು ಖರೀದಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ನನಗೆ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ನಮಗಿಂತಲೂ ಅವರಿಗೆ ಈ ಬಗ್ಗೆ ಹೆಚ್ಚು ತಿಳಿದಿದೆ. ಕೇವಲ ದೆಹಲಿಯಷ್ಟೇ ಅಲ್ಲ, ದೇಶಾದ್ಯಂತ ಕಳೆದ ಕೆಲವು ವರ್ಷಗಳಲ್ಲಿ ಇತರ ಪಕ್ಷಗಳ ಯಾವ ಶಾಸಕರು ಮತ್ತು ಯಾವ ಸರ್ಕಾರಗಳು ಉರುಳಿದವು ಎಂಬುದೂ ಪೊಲೀಸರಿಗೆ ತಿಳಿದಿದೆ. ಹಾಗಿದ್ದರೂ ಈ ನಾಟಕ ಏಕೆ? ಎಂದು ಪ್ರಶ್ನಿಸಿದ್ದಾರೆ.