ಬಳ್ಳಾರಿ,ಫೆ.05 :ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಅಂಗವಾಗಿ ಜಾಥಾವು ಭಾನುವಾರದಂದು ಸಿರುಗುಪ್ಪ ತಾಲ್ಲೂಕಿನ ಬಗ್ಗೂರು, ಕುರುವಳ್ಳಿ, ಬಿ.ಎಂ.ಸೂಗೂರು ಹಾಗೂ ರಾವಿಹಾಳು ಗ್ರಾಮ ಪಂಚಾಯಿತಿಗಳ ಮಾರ್ಗವಾಗಿ ಸಂಚರಿಸಿತು. ಅಗಸನೂರು ಹಾಗೂ ನಾಡಂಗ ಗ್ರಾಮಗಳಲ್ಲಿ ಗ್ರಾಮಸ್ಥರು ಜಾಥಾವನ್ನು ಸ್ವಯಂ ಪ್ರೇರಿತರಾಗಿ ಅತ್ಯಂತ ಅದ್ದೂರಿಯಾಗಿ ಮೆರವಣಿಗೆಯ ಮೂಲಕ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.
ಜಾಥಾವನ್ನು ಪ್ರತೀ ಗ್ರಾಮ ಪಂಚಾಯಿತಿಗಳಲ್ಲಿ ಕಳಶ ಮತ್ತು ಪೂರ್ಣ ಕುಂಭ ಹೊತ್ತ ಮಹಿಳೆಯರು, ಡೊಳ್ಳು ಕಲಾವಿದರು, ತಾಷೆ ರಾಂಡೋಲ್ ಕಲಾವಿದರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಗ್ರಾಮದ ಜನಪ್ರತಿನಿಧಿಗಳು, ಊರಿನ ಮುಖಂಡರು ಹಾಗೂ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿದರು.
ಬಗ್ಗೂರು ಗ್ರಾಮದಲ್ಲಿ ತಾಲ್ಲೂಕು ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಕೊಡ್ಲೆ ಮಲ್ಲಿಕಾರ್ಜುನ ಮಾತನಾಡಿ, ಭಾರತದ ಸಂವಿಧಾನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಬರೆದಂತೆ ಎಲ್ಲಾ ಜಾತಿ ಧರ್ಮಗಳು, ತಮ್ಮ ಜಾತಿಗಳನ್ನು ಬಿಟ್ಟು, ತಾವೆಲ್ಲರೂ ಒಗ್ಗಟ್ಟಾಗಿ ಶಿಕ್ಷಣ, ಉದ್ಯೋಗ ಸಮಾನರು ಮತ್ತು ಸಾರ್ವಜನಿಕರಲ್ಲಿ ಎಲ್ಲರೂ ಅಣ್ಣ ತಮ್ಮಂದಿರಾಗಿ ಬದುಕಬೇಕೆಂಬುದೇ ವಿದ್ಯಾರ್ಥಿಗಳು ಈಗ ಓದಿದ ಸಂವಿಧಾನದ ಪ್ರಸ್ತಾವನೆಯ ಮೊದಲನೆಯ ಪುಟವಾಗಿದೆ ಎಂದು ಹೇಳಿದರು.
ನಾವೆಲ್ಲರೂ ಭಾರತೀಯರು, ನಮ್ಮ ಹಕ್ಕುಗಳನ್ನು ಪ್ರತಿಯೊಬ್ಬರೂ ಪಡೆದುಕೊಂಡು, ನಮ್ಮ ಹಕ್ಕುಗಳ ಮೂಲಕ ನಮ್ಮ ಮನೆ, ನಮ್ಮ ಊರು, ನಮ್ಮ ಜಿಲ್ಲೆ, ನಮ್ಮ ರಾಜ್ಯ ಹಾಗೂ ನಮ್ಮ ದೇಶವನ್ನು ಕಾಪಾಡಬೇಕೆಂಬ ಉದ್ದೇಶದಿಂದ ಈ ಜಾಥಾ ಕಾರ್ಯಕ್ರಮ ರಾಜ್ಯಾದಾದ್ಯಂತ ಸಂಚರಿಸುತ್ತಿದೆ ಎಂದು ತಿಳಿಸಿದರು.
ರಾರಾವಿ ಗ್ರಾಮದ ಶ್ರೀ ಚೈತನ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರುಗಳಾದ ಎರ್ರೆಪ್ಪ ಅವರು ಮಾತನಾಡಿ, ಸಂವಿಧಾನವನ್ನು ಪ್ರತಿಯೊಬ್ಬರೂ ಓದಲೇಬೇಕು, ಭಾರತೀಯರಿಗೆ ಸಂವಿಧಾನವು ಪವಿತ್ರವಾದ ಗ್ರಂಥವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಎಲ್ಲಾ ಜನಾಂಗದವರಿಗೆ, ಬುಡಕಟ್ಟು ಜನಾಂಗದವರಿಗೆ ಸಮಾನವಾಗಿರುವ ಹಕ್ಕನ್ನು ನೀಡುವ ಸಲುವಾಗಿ ಸಂವಿಧಾನವನ್ನು ಬರೆದರು ಎಂದು ತಿಳಿಸಿದರು.
ಬಳಿಕ ಸಂಜೆ ರಾವಿಹಾಳು ಗ್ರಾಪಂ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ರಾವಿಹಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಚಂದ್ರಪ್ಪ ಅವರು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ದಮನಿತರ, ಹಿಂದುಳಿದವರ ಹಾಗೂ ಮಹಿಳೆಯರ ಅಭಿವೃದ್ಧಿಗಾಗಿ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು, ವಿಧಿಗಳ ಮೂಲಕ ಸಂವಿಧಾನಾತ್ಮಕ ಅವಕಾಶಗಳನ್ನು ಕಲ್ಪಿಸಿ ಅಜರಾಮರರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ಅಳವಡಿಸಿರುವ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ, ಸಮಾನತೆ, ಅಭಿವ್ಯಕ್ತಿ, ಭ್ರಾತೃ ಭಾವನೆ ಮೊದಲಾದ ಪರಿಕಲ್ಪನೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಮನಮುಟ್ಟುವಂತೆ ವಿವರಿಸಿದರು.
ರಾವಿಹಾಳು ಗ್ರಾಪಂ ಅಧ್ಯಕ್ಷ ಜಯರಾಂ ರೆಡ್ಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷರಾದ ಈರಮ್ಮ ಮಲ್ಲಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಬಸವರಾಜ, ಗ್ರಾಮ ಪಂಚಾಯಿತಿ ಸದಸ್ಯ ಟಿ.ಮಾದಣ್ಣ, ರಾಚಯ್ಯ ಸ್ವಾಮಿ, ಪ್ರೌಢಶಾಲಾ ಮುಖ್ಯ ಗುರುಗಳಾದ ಅಪರ್ಣಾ, ಸಮೂಹ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ರಾಮಚಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ವರಿ, ನಿಯಪಾಲಕರಾದ ಬಾಳಪ್ಪ ಕವಲೂರ, ಮೌನೇಶ್ವರ, ಚಂದ್ರಶೇಖರ, ಶಶಿಧರ ಸ್ವಾಮಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿಲಯಪಾಲಕರಾದ ಶಶಿಧರ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಕುರಿತು ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು. ಸಂವಿಧಾನ ರಚನಾ ಸಭೆ ಹಾಗೂ ಸಂವಿಧಾನದ ಕುರಿತ ವೀಡಿಯೋ ತುಣುಕುಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು ಮತ್ತು ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿ ಜಾಥಾದ ಉದ್ದಕ್ಕೂ ಸಂವಿಧಾನ ಪ್ರಸ್ತಾವನೆಯ ಪ್ರತಿಗಳನ್ನು ಹಂಚಿಕೆ ಮಾಡಲಾಯಿತು.