ಬೆಂಗಳೂರು: ಆರ್ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಸಂಚರಿಸಲಿರುವ ಮೊದಲ ಚಾಲಕ ರಹಿತ ರೈಲು ಈಗಾಗಲೇ ಶಾಂಘೈನಿಂದ ಚೆನ್ನೈಗೆ ಬಂದಿದ್ದು, ಫೆಬ್ರವರಿ 20 ಅಥವಾ ಅದಕ್ಕೂ ಮೊದಲು ಬೆಂಗಳೂರಿನ ಹೆಬ್ಬಗೋಡಿ ಡಿಪೋವನ್ನು ತಲುಪಲು ಸಜ್ಜಾಗಿದೆ. ಈ ಮಧ್ಯೆ, ಸೆಪ್ಟೆಂಬರ್ ವೇಳೆಗೆ ಬಹು ನಿರೀಕ್ಷಿತ ನಮ್ಮ ಮೆಟ್ರೋ ಈ ಹಳದಿ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಇದು ಸಂಪೂರ್ಣವಾಗಿ ಹೊಸ ರೈಲು ಸೆಟ್ ಆಗಿರುವುದರಿಂದ ಮೆಟ್ರೋ ರೈಲು ಸುರಕ್ಷತೆಗಾಗಿ ಆಯುಕ್ತರನ್ನು ಹೊರತುಪಡಿಸಿ ರೈಲ್ವೆ ಮಂಡಳಿಯಿಂದ ಹೆಚ್ಚುವರಿ ಅನುಮತಿಯನ್ನು ಪಡೆಯಬೇಕಾಗಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
ಕಾಮಗಾರಿ ಪೂರ್ಣಗೊಂಡಿದ್ದರೂ ಕಾರ್ಯಾಚರಣೆ ಆರಂಭವಾಗಲು ಆರು ತಿಂಗಳ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿದ ಅವರು,”ಈ ತಿಂಗಳ ಅಂತ್ಯಕ್ಕೆ ಕೋಚ್ಗಳು ಬರಲಿವೆ. ಅವುಗಳನ್ನು ನೋಡಿಸಿದ ನಂತರ ಮಾರ್ಚ್ ಮೊದಲ ವಾರದೊಳಗೆ ಡಿಪೋದಲ್ಲಿಯೇ ಸ್ಥಿರ ಪರೀಕ್ಷೆಗಳು ಪ್ರಾರಂಭವಾಗಬಹುದು. ಅದು ಒಂಬತ್ತು ಪರೀಕ್ಷೆಗಳನ್ನು ಒಳಗೊಂಡಿದೆ. ಕೆಲವು ಪರೀಕ್ಷೆಗಳು ಡಿಪೋದ ಒಳಗಿನ ಹಳಿಗಳ ಮೇಲೂ ಮಾಡಬಹುದು. ಮಾರ್ಚ್ ಅಂತ್ಯದ ವೇಳೆಗೆ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಇತರ ಪರೀಕ್ಷೆಗಳು ಪ್ರಾರಂಭವಾಗಲಿವೆ ಎಂದಿದ್ದಾರೆ.
ರೈಲ್ವೆ ಮಂಡಳಿಯ ಸಲಹೆಗಾರರಾಗಿರುವ ಲಖನೌದಲ್ಲಿನ ಸಂಶೋಧನೆ, ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆಯಿಂದ ಪ್ರಮಾಣೀಕರಣ ಪಡೆಯಬೇಕಾಗಿದೆ. “ಇದು ಹೊಸ ರೈಲು ವ್ಯವಸ್ಥೆ ಆಗಿರುವುದರಿಂದ ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರಿಂದ ಅನುಮೋದನೆ ಪಡೆಯಬೇಕಾಗಿದೆ. ಇದು ಸಂವಹನ ಆಧಾರಿತ ರೈಲು ನಿಯಂತ್ರಣ(ಸಿಬಿಟಿಸಿ) ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ” ಎಂದು ಅವರು ಹೇಳಿದ್ದಾರೆ.
ಚೀನಾದ ಎಂಜಿನಿಯರ್ಗಳ ಮೇಲ್ವಿಚಾರಣೆಯಲ್ಲಿ ಟಿಟಾಗರ್ ಕೋಚ್ ಫ್ಯಾಕ್ಟರಿಯಲ್ಲಿ ಸಿದ್ಧವಾಗುತ್ತಿರುವ ಎರಡು ರೈಲು ಸೆಟ್ಗಳು ಸಂಪೂರ್ಣವಾಗಿ ಸಿದ್ಧವಾಗಲು ಎರಡರಿಂದ ಮೂರು ತಿಂಗಳು ತೆಗೆದುಕೊಳ್ಳುತ್ತದೆ ಎಂದು ಇನ್ನೊಂದು ಮೂಲಗಳು ತಿಳಿಸಿವೆ. ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಹೊತ್ತಿಗೆ, ಏಳು ಅಥವಾ ಎಂಟು CBTC ರೈಲುಗಳನ್ನು ಒದಗಿಸುವ ಸಾಧ್ಯತೆ ಎಂದು” ಎಂದು ಅವರು ತಿಳಿಸಿದ್ದಾರೆ.
ಇನ್ನು 2025 ರ ಮಧ್ಯದ ವೇಳೆಗೆ ಹೊರ ವರ್ತುಲ ರಸ್ತೆ(ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಕೆಆರ್ ಪುರ) ಮತ್ತು ಏರ್ಪೋರ್ಟ್ ಲೈನ್ನಲ್ಲಿ(ಕೆಆರ್ ಪುರದಿಂದ ಕೆಐಎ) ಎಲ್ಲಾ ನಾಗರಿಕ ಮೂಲಸೌಕರ್ಯ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಬಿಎಂಆರ್ಸಿಎಲ್ನ ಆದ್ಯತೆಯಾಗಿದೆ. ಈ ಮಾರ್ಗದಲ್ಲಿ ಕಾಮಗಾರಿಯನ್ನು ತ್ವರಿತಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.