ಯುಪಿಎ ಸರ್ಕಾರ ಮತ್ತು ಎನ್ಡಿಎ ಸರ್ಕಾರಗಳ ಅಧಿಕಾರಾವಧಿಯಲ್ಲಿ ಆರ್ಥಿಕ ನಿರ್ವಹಣೆ ಹೇಗಿತ್ತು ಎಂದು ಹೋಲಿಸಿ ಸರ್ಕಾರ ಶ್ವೇತ ಪತ್ರ ಮಂಡಿಸುವ ಸಾಧ್ಯತೆ ಇದೆ. ಫೆ. 1ರಂದು ಬಜೆಟ್ ಮಂಡಿಸುವ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶ್ವೇತ ಪತ್ರ ಹೊರಡಿಸುವ ನಿರ್ಧಾರ ಘೋಷಿಸಿದ್ದರು. ಯುಪಿಎ ಸರ್ಕಾರ ನಿರ್ಗಮಿಸುವಾಗ ಆರ್ಥಿಕತೆ ದುಸ್ಥಿತಿಯಲ್ಲಿತ್ತು. ಎನ್ಡಿಎ ಸರ್ಕಾರದ ನೀತಿಗಳಿಂದಾಗಿ ಆರ್ಥಿಕತೆ ಚೇತರಿಸಿಕೊಂಡಿದೆ ಎಂದು ಬಿಜೆಪಿ ನಾಯಕ ಜಯಂತ್ ಸಿನ್ಹಾ ಹೇಳಿದ್ದಾರೆ.
ನವದೆಹಲಿ, ಫೆ. 8: ತೆರಿಗೆ ಹಂಚಿಕೆ ಕುರಿತು ಎನ್ಡಿಎ ಮತ್ತು ಯುಪಿಎ ಮೈತ್ರಿಕೂಟಗಳ ಮಧ್ಯೆ ಏಟು ಎದಿರೇಟು ನಡೆಯುತ್ತಿರುವಂತೆಯೇ ಸರ್ಕಾರ ಎರಡೂ ಮೈತ್ರಿಕೂಟಗಳ ಅಧಿಕಾರಾವಧಿಯಲ್ಲಿನ ಸಾಧನೆಗಳನ್ನು ಜನರ ಮುಂದಿಡಲು ಹೊರಟಿದೆ. 2004ರಿಂದ 2014ರವರೆಗೆ 10 ವರ್ಷ ಯುಪಿಎ ಆಡಳಿತ ಇತ್ತು. 2014ರಿಂದ 2024, ಇಲ್ಲಿವರೆಗೆ 10 ವರ್ಷ ಎನ್ಡಿಎ ಆಡಳಿತ ಇದೆ. ಈ ಎರಡೂ ಆಡಳಿತದಲ್ಲಿ ಆರ್ಥಿಕ ನಿರ್ವಹಣೆ ಹೇಗಿತ್ತು, ಆರ್ಥಿಕ ಪರಿಸ್ಥಿತಿ ಹೇಗಿತ್ತು ಎಂದು ವಿವರಿಸಿ ಸರ್ಕಾರ ಶ್ವೇತಪತ್ರ ಹೊರಡಿಸುತ್ತಿದೆ. ವರದಿ ಪ್ರಕಾರ ಲೋಕಸಭೆಯಲ್ಲಿ ಇಂದೇ (ಫೆ. 8, ಗುರುವಾರ) ಈ ಶ್ವೇತಪತ್ರ ಮಂಡನೆ ಆಗುವ ಸಾಧ್ಯತೆ ಇದೆ.
ಎನ್ಡಿಎ ಸರ್ಕಾರ ಸರಿಯಾಗಿ ಆಡಳಿತ ನಿರ್ವಹಣೆ ಮಾಡುತ್ತಿಲ್ಲ. ದೇಶದ ಸಾಲ ಹೆಚ್ಚಾಗಿದೇ ಹೊರತು ಅಭಿವೃದ್ಧಿ ಆಗಿಲ್ಲ ಎಂಬುದು ವಿಪಕ್ಷಗಳ ಪ್ರಮುಖ ಆಕ್ಷೇಪ. ಈ ಹಿನ್ನೆಲೆಯಲ್ಲಿ ಸರ್ಕಾರ ವೈಟ್ ಪೇಪರ್ ಮಂಡಿಸಲು ಅಣಿಯಾಗಿದೆ. ಫೆಬ್ರುವರಿ 1ರಂದು ಬಜೆಟ್ ಮಂಡನೆ ವೇಳೆಯೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶ್ವೇತ ಪತ್ರ ಮಂಡಿಸಲು ಸರ್ಕಾರ ನಿರ್ಧರಿಸಿರುವುದನ್ನು ತಿಳಿಸಿದ್ದರು.
ಯುಪಿಎ ನಿರ್ಗಮಿಸುವಾಗ ಜಿಡಿಪಿ ದರ ಶೇ. 5ರಷ್ಟಿತ್ತಾ?
ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಹಾಗು ಬಿಜೆಪಿ ಸಂಸದ ಜಯಂತ್ ಸಿನ್ಹಾ ನಿನ್ನೆ ಬುಧವಾರ ಮಾತನಾಡುತ್ತಾ, ಯುಪಿಎ ಸರ್ಕಾರ ಅಧಿಕಾರದಿಂದ ನಿರ್ಗಮಿಸುವಾಗ ಆರ್ಥಿಕ ದುಸ್ಥಿತಿ ಹೇಗಿತ್ತು ಎನ್ನುವುದನ್ನು ಬಣ್ಣಿಸಿ, ಶ್ವೇತಪತ್ರದಲ್ಲಿ ಇವೆಲ್ಲಾ ಸಂಗತಿಗಳನ್ನು ಬೆಳಕಿಗೆ ತರಲಾಗುವುದು ಎಂದಿದ್ದರು.
‘ಯುಪಿಎ ಸರ್ಕಾರ ಹೋಗುವಾಗ ದೇಶದ ಜಿಡಿಪಿ ಬೆಳವಣಿಗೆ ದರ ಶೇ. 5ಕ್ಕೆ ಇಳಿದಿತ್ತು. ಹಣದುಬ್ಬರ ಶೇ. 10ಕ್ಕೆ ಏರಿತ್ತು. ಬ್ಯಾಂಕುಗಳ ಎನ್ಪಿಎ ಅಥವಾ ಅನುತ್ಪಾದಕ ಆಸ್ತಿ ಶೇ. 10ಕ್ಕೆ ಹೆಚ್ಚಾಗಿತ್ತು. ಬ್ಯಾಲನ್ಸ್ ಆಫ್ ಪೇಮೆಂಟ್ ವಿಚಾರದಲ್ಲಿ ಬಿಕ್ಕಟ್ಟು ಎದುರಾಗಿತ್ತು.
‘ಅಂಥ ದುಸ್ಥಿತಿಯಲ್ಲಿದ್ದ ಆರ್ಥಿಕತೆಗೆ ಸಕಾರಾತ್ಮಕ ಪರಿವರ್ತನೆ ಹೇಗೆ ತರಲಾಯಿತು ಎಂಬುದನ್ನು ಜನರಿಗೆ ತಿಳಿಸಬೇಕಾಗುತ್ತದೆ. ಪ್ರತಿಯೊಂದು ವಲಯದಲ್ಲೂ ದೋಷಗಳಿದ್ದವು. ಇವತ್ತು ಆರ್ಥಿಕತೆ ಬೆಳಗುತ್ತಿದ್ದು, ವೇಗವಾಗಿ ಧಾವಿಸುತ್ತಿದೆ ಎಂದರೆ ಕಳೆದ 10 ವರ್ಷದಲ್ಲಿ ನಾವು ಮಾಡಿದ ಕೆಲಸ ಮತ್ತು ಜಾರಿಗೆ ತಂದ ನೀತಿಗಳೇ ಕಾರಣ,’ ಎಂದು ಜಯಂತ್ ಸಿನ್ಹಾ ಹೇಳಿದ್ದಾರೆ.