ಭಾರತ ಬಡದೇಶವಾಗಿ ಉಳಿದಿಲ್ಲ. 2013/14 ರಲ್ಲಿ ಇದ್ದ ನೇರ ತೆರಿಗೆ ಸಂಗ್ರಹಣೆ 2022/23 ರಲ್ಲಿ 173 ಪ್ರತಿಶತ ಏರಿಕೆ ಕಂಡಿದೆ. ಅಂದರೆ 2013/14ರಲ್ಲಿ 7 ಲಕ್ಷ 21 ಸಾವಿರ ಕೋಟಿ ರೂಪಾಯಿ ಇದ್ದ ತೆರಿಗೆ ಸಂಗ್ರಹಣೆ 2022/23ರಲ್ಲಿ 19ಲಕ್ಷ 72 ಸಾವಿರ ಕೋಟಿ ರೂಪಾಯಿಯಾಗಿದೆ.
ಮಾಸಿಕ ಆದಾಯ ಎಂಟೂವರೆ ಲಕ್ಷ ರೂಪಾಯಿ ಅಂದರೆ ವಾರ್ಷಿಕ ಕೋಟಿ ರೂಪಾಯಿ ಆದಾಯ ಹೊಂದಿರುವವರ ಸಂಖ್ಯೆ ಎರಡು ಲಕ್ಷ 16ಸಾವಿರವಾಗಿದೆ. ಇದು ಆದಾಯ ತೆರಿಗೆ ಕಟ್ಟುವವರ ಸಂಖ್ಯೆ. ಒಂದು ಅಂದಾಜಿನ ಪ್ರಕಾರ ಇಷ್ಟು ಆದಾಯ ಗಳಿಸುತ್ತಿರುವವ ಭಾರತೀಯರ ಸಂಖ್ಯೆ 4 ಕೋಟಿ! ಈ ಮಾತನ್ನು ಸಾಬೀತು ಪಡಿಸಲು ನಾವು ಒಂದು ಸಣ್ಣ ಅಂಶವನ್ನು ಉದಾಹರಣೆಗೆ ತೆಗೆದುಕೊಂಡರೆ ಸಾಕು. ಬೆಂಜ್ ಕಾರು ಪ್ರತಿ ದಿನ ಭಾರತದಲ್ಲಿ 50 ಕಾರುಗಳನ್ನು 2023ರಲ್ಲಿ ಮಾರಾಟ ಮಾಡಿದೆ. ಅಂದರೆ ವರ್ಷಕ್ಕೆ 18,250 ಕಾರುಗಳನ್ನು ಮಾರಾಟ ಮಾಡಿದೆ. ಇದರ ಕನಿಷ್ಠ ಬೆಲೆ ಎಪ್ಪತ್ತು ಲಕ್ಷವಿದೆ, ಹೀಗಾಗಿ ನಾವು ಅವರೇಜ್ 70 ಲಕ್ಷ ಹಣವನ್ನು ಗುಣಿಸಿದರೆ 13,125 ಕೋಟಿ ರೂಪಾಯಿ ಆಗುತ್ತದೆ. ಇನ್ನು ಬಿಎಂಡಬ್ಲ್ಯೂ, ಆಡಿ, ಟೊಯೋಟಾ, ಇನ್ನಿತರೇ ಐಷಾರಾಮಿ ಕಾರುಗಳನ್ನು ಲಕ್ಕ ಹಾಕಿದರೆ ಅದು ಬೇರೆಯ ಕಥೆಯನ್ನು ತೆರೆದಿಡುತ್ತದೆ. ಒಟ್ಟಾರೆ 2023ರ ಡಿಸೆಂಬರ್ ಕೊನೆಯವರೆಗೆ ಮಾರಾಟವಾದ ಕಾರುಗಳ ಸಂಖ್ಯೆ 41 ಲಕ್ಷ, ಒಟ್ಟಾರೆ ಮೌಲ್ಯ ನಾಲ್ಕುವರೆ ಲಕ್ಷ ಕೋಟಿ ರೂಪಾಯಿಯ ವಹಿವಾಟು ನಡೆದಿದೆ. ಇದು ಕೇವಲ ಆಟೋಮೊಬೈಲ್ ವಲಯದ ಕಥೆ. ಹೀಗೆ ಪ್ರತಿ ವಲಯವು ಹೇಳುತ್ತಿರುವುದು ಇಂತಹುದೇ ಏರಿಕೆಯ ಕಥೆ. ಭಾರತದ ಜನಸಂಖ್ಯೆ 140 ಕೋಟಿ ಎಂದು ಕೊಂಡರೆ ಅದರಲ್ಲಿ ಅದು ಪ್ರತಿಶತ ಜನ ಈ ಕಾರು ಅಥವಾ ಇನ್ನಿತರೇ ಐಷಾರಾಮಿ ವಸ್ತುಗಳನ್ನು ಖರೀದಿ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅಂದರೆ ಭಾರತದ ಜನಸಂಖ್ಯೆಯ 7 ಕೋಟಿಯಾಷ್ಟು ಜನ ಯೂರೋಪು ಅಥವಾ ಅಮೇರಿಕಾ ಅಥವಾ ಇನ್ನಿತರೇ ಮುಂದುವರಿದ ದೇಶದ ಪ್ರಜೆಗಳಿಗೆ ಸಮವಾಗಿ ಅಥವಾ ಅದಕ್ಕಿಂತ ಉತ್ತಮವಾಗಿ ಇಲ್ಲಿ ಬಾಳುತ್ತಿದ್ದಾರೆ. ಏಳು ಕೋಟಿ ಜನಸಂಖ್ಯೆ ಎಂದರೆ ಕನಿಷ್ಠ ಎರಡು ಅಥವಾ ಮೂರು ಯೂರೋಪಿಯನ್ ದೇಶಗಳಿಗೆ ಸಮ. ಅದರಲ್ಲೂ ಈ ಮಟ್ಟದ ಖರೀದಿ ಶಕ್ತಿ ಇರುವವರ ಲೆಕ್ಕಾಚಾರ ಹಾಕಿದರೆ ಪೂರ್ಣ ಅಮೇರಿಕಾ ದೇಶವನ್ನೂ ನಾವು ಮೀರಿಸುತ್ತೇವೆ.
ಮೇಲಿನ ಲೆಕ್ಕಾಚಾರ ಸಾಹುಕಾರರದ್ದು ಎನ್ನುವ ಮಾತನ್ನು ಬದಿಗಿಟ್ಟು ಮಧ್ಯಮ ವರ್ಗದ ಜನರ ಲೆಕ್ಕಾಚಾರ ಹಾಕೋಣ. ಭಾರತದ 31 ಪ್ರತಿಶತ ಜನರನ್ನು ಮಧ್ಯಮವರ್ಗ ಎನ್ನಲಾಗಿದೆ. ಐದು ಲಕ್ಷದಿಂದ 30 ಲಕ್ಷ ವಾರ್ಷಿಕ ಆದಾಯ ಇರುವವರನ್ನು ಈ ಲೆಕ್ಕಾಚಾರದ ಅಡಿಯಲ್ಲಿ ಪರಿಗಣಿಸಲಾಗಿದೆ. ಇದರಲ್ಲಿ ಬಹುತೇಕರ ಆದಾಯ ವಾರ್ಷಿಕ 12 ರಿಂದ 15 ಲಕ್ಷದಲ್ಲಿದೆ. ಒಟ್ಟಾರೆ ಭಾರತದ 43.4 ಕೋಟಿ ಜನರನ್ನು ನಾವು ಮಿಡ್ಲ್ ಕ್ಲಾಸ್ ಎನ್ನಬಹುದು. 2013/14 ರಲ್ಲಿ ಈ ವರ್ಗದ ಆದಾಯ ವಾರ್ಷಿಕ 3/4 ಲಕ್ಷ ರೂಪಾಯಿಯಿತ್ತು ಎನ್ನುವುದನ್ನು ನಾವು ಗಮನಿಸಬೇಕು.
ಕಳೆದ 10 ವರ್ಷದಲ್ಲಿ ಭಾರತ ಪೂರ್ಣವಾಗಿ ಬದಲಾಗಿ ಹೋಗಿದೆ. ಇಲ್ಲಿನ ಸಿರಿವಂತರ ಸಂಖ್ಯೆ ಹೆಚ್ಚಾಗಿದೆ. ಮಧ್ಯಮವರ್ಗದ ಸಂಖ್ಯೆ ಹೆಚ್ಚಾಗಿದೆ. ಬಡವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಈ ಎಲ್ಲಾ ಕಾರಣದಿಂದ ಭಾರತದ ಡೊಮೆಸ್ಟಿಕ್ ಕನ್ಸಮ್ಷನ್ ಅತ್ಯಂತ ಹೆಚ್ಚಾಗಿದೆ. ಇದು ಉತ್ತಮ ಬೆಳವಣಿಗೆ. ಅಭಿವೃದ್ಧಿ ನಿಲ್ಲದೆ ಸಾಗಲು ನಾವು ಬೇರೆ ದೇಶದ ಮೇಲೆ ಅವಲಂಬಿತರಾಗಬೇಕು , ಆದರೆ ನಮ್ಮ ಆಂತರಿಕ ಬಳಕೆಯಲ್ಲಿ ಹೆಚ್ಚಳ ಆಗಿರುವುದು ಅವಲಂಬನೆಯನ್ನು ಅಷ್ಟರಮಟ್ಟಿಗೆ ಕಡಿಮೆ ಮಾಡುತ್ತದೆ. ಜಾಗತಿಕ ಮಟ್ಟದಲ್ಲಿ ಭಾರತವನ್ನು ಅಷ್ಟು ಸುಲಭವಾಗಿ ಯಾರೂ ರೈಟ್ ಆಫ್ ಮಾಡಲು ಆಗದ ಮಟ್ಟಕ್ಕೆ ಇಂದು ಬೆಳೆದಿದೆ. ಐಷಾರಾಮಿ ಪದಾರ್ಥಗಳನ್ನು ಉತ್ಪಾದಿಸುವ ಸಂಸ್ಥೆಗಳ ಜೊತೆಗೆ ಇನ್ನಿತರ ಅವಶ್ಯಕವಾಗಿ ಬೇಕಾಗುವ ಪದಾರ್ಥಗಳನ್ನು ಉತ್ಪಾದಿಸುವ ಸಂಸ್ಥೆಗಳು ಬೇರೆ ದೇಶದಿಂದ ಭಾರತಕ್ಕೆ ಬರಲು ಸಿದ್ಧವಿರಲು ಕೂಡ ಇಲ್ಲಿನ ಅಗಾಧ ಮಾರುಕಟ್ಟೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಭಾರತ ಸಿರಿವಂತ ದೇಶವಾಗಿದೆ. ಆದರೆ ಜಾಗತಿಕ ಮಟ್ಟದಲ್ಲಿ ಶ್ರೇಷ್ಠವಾಗಲು ಇನ್ನಷ್ಟು ಕೆಲಸ ಬಾಕಿಯಿದೆ.
ಮುಂದಿನ ಇಪ್ಪತ್ತು ವರ್ಷ ಭಾರತಕ್ಕೆ ಸೇರಿದ್ದು , ಇದರ ಬಗ್ಗೆ ಯಾವುದೇ ಸಂಶಯ ಬೇಡ. ಇಂತಹ ಕಾಲಘಟ್ಟದಲ್ಲಿ ನಾವು ಸಮಾಜದಲ್ಲಿ ಆಗುತ್ತಿರುವ ಬದಲಾವಣೆಯ ಗಾಳಿಗೆ ಸಿಲುಕಿ ನಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬಾರದು. ಒಂದು ಉತ್ತಮ ಬದುಕು ಬದುಕಲು, ಅದೂ ಕೆಲಸದ ಮತ್ತು ಅದರಿಂದ ಬರುವ ಹಣದ ಸಹಾಯವಿಲ್ಲದೆ ಜೀವಿಸುವುದಕ್ಕೆ ಬೇಕಾಗುವ ಸಿದ್ಧತೆಗಳನ್ನು ನಾವು ಮಾಡಿಕೊಳ್ಳಬೇಕು.
ನಿತ್ಯ ಬದುಕಿನ ಜಂಜಾಟದಿಂದ ದೂರಾಗುವಷ್ಟು ಹಣ ಗಳಿಸಬೇಕು. ಶ್ರೀಮಂತರಾಗುವುದು ಅಥವಾ ಸ್ಥಿತಿವಂತರಾಗುವುದು ಕಷ್ಟವೇನೂ ಅಲ್ಲ. ಆದರೆ ನಮ್ಮ ಬಹುತೇಕ ವೇಳೆ ನಿತ್ಯದ ಬದುಕನ್ನು ಬದುಕಲು ಬೇಕಾಗುವ ವೇತನಕ್ಕೆ ದುಡಿಯಲು ಶುರು ಮಾಡಿದರೆ ನಮ್ಮ ಬಳಿ ಆಲೋಚಿಸಲು ಸಮಯವೆಲ್ಲಿ ಸಿಗುತ್ತದೆ ? ನಾವು ಮುಂದಿನ ದಿನಗಳ ಬಗ್ಗೆ ಕನಸ್ಸು ,ಆಲೋಚನೆ ಮಾಡದಿದ್ದರೆ ಅದನ್ನು ಸಾಕಾರಗೊಳಿಸುವ ದಾರಿಯಾದರೂ ಯಾವುದು ? ಹೀಗಾಗಿ ಕನಸು ಕಾಣಲು ಬೇಕಾಗುವ ಸಮಯವನ್ನು ಮೊದಲು ನಾವು ಗಳಿಸಿಕೊಳ್ಳಬೇಕು. ಇದಕ್ಕಾಗಿ ಏನು ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು. ನಾವು ಬಜೆಟ್ ಮಾಡಿಕೊಂಡಿದ್ದೆವು ಅಲ್ಲವೇ ? ಅದರ ಪ್ರಕಾರ ಮಾಸಿಕ ಆದಾಯ ಎಷ್ಟು ಬೇಕಾಗುತ್ತದೆ ಎನ್ನುವುದು ತಿಳಿದುಬರುತ್ತದೆ. ಎಲ್ಲಕ್ಕೂ ಮೊದಲಿಗೆ ಆ ಹಣವನ್ನು ನಾವು ನಮ್ಮ ಸಮಯವನ್ನು ಒತ್ತೆಯಿಡದೆ ಅಥವಾ ಈಗ ವ್ಯಯಿಸುವ ಸಮಯಕ್ಕಿಂತ ಕಡಿಮೆ ಸಮಯವನ್ನು ವ್ಯಯಿಸಿ ಹೇಗೆ ಗಳಿಸುವುದು? ಎನ್ನುವುದರ ಬಗ್ಗೆ ಗಮನ ಹರಿಸಬೇಕು. ಆದಷ್ಟೂ ಕಡಿಮೆ ಹಣದಲ್ಲಿ ಬದುಕುವುದು , ತನ್ಮೂಲಕ ಯೋಚಿಸಲು ಹೆಚ್ಚು ಸಮಯವನ್ನು ಗಳಿಸಿಕೊಳ್ಳುವುವದನ್ನು ಮಾಡಬೇಕು. ಅರ್ಥವಿಷ್ಟೆ ಎರಡು ಅಥವಾ ಮೂರು ವರ್ಷ ನಮ್ಮ ಕನಸಿನ ಬೆನ್ನತ್ತಲು , ಯಶಸ್ಸು ಪಡೆಯಲು ಬೇಕು ಎಂದಾದರೆ ಅಷ್ಟು ವರ್ಷಕ್ಕೆ ಬೇಕಾಗುವ ಹಣದ ಲೆಕ್ಕಾಚಾರ ಮಾಡಿ ಅಷ್ಟು ಹಣವನ್ನು ಕ್ರೋಡೀಕರಿಸಿ ಇಡಬೇಕು. ಅಯ್ಯೋ ನಾಳೆ ಹೇಗೋ ? ಮುಂದಿನ ತಿಂಗಳ ಗತಿಯೇನು ? ಎನ್ನುವ ಆತಂಕದಿಂದ ದೂರಾದರೆ, ಮತ್ತು ಮಾಡಬೇಕಾದ ಕೆಲಸ, ಗುರಿಯ ಕಡೆಗೆ ಹೆಚ್ಚಿನ ಸಮಯವನ್ನು ನೀಡಿದರೆ, ತೀವ್ರವಾಗಿ ಅನುಭವಿಸಿ ಬಯಸಿದರೆ, ಬಯಸಿದ್ದು ಸಿಕ್ಕೇ ಸಿಗುತ್ತದೆ.
ಹೀಗಾಗಿ ನಮ್ಮ ಬದುಕಿನ ಮೇಲೆ ನಿಯಂತ್ರಣ ಹೊಂದುವುದು ಅತ್ಯಂತ ಅವಶ್ಯಕ. ಆದರೆ ಇಂದೇನಾಗಿದೆ ಯುವ ಜನತೆ ಗಳಿಕೆ-ಖರ್ಚುಗಳ ಸೈಕಲ್ ಸೃಷ್ಟಿ ಮಾಡಿಕೊಂಡಿದ್ದಾರೆ. ನಾಳೆಗೆಂದು ಉಳಿಸುವ ಪರಿಪಾಠ ನಿಧಾನಕ್ಕೆ ನೇಪಥ್ಯಕ್ಕೆ ಸೇರುತ್ತಿದೆ. ನಾಲ್ಕು ದಶಕದ ನಂತರ ಮೊದಲ ಬಾರಿಗೆ ಭಾರತದಲ್ಲಿ ಉಳಿಕೆಯಲ್ಲಿನ ಅನುಪಾತ ಕುಸಿತ ಕಂಡಿದೆ ಎನ್ನುವ ಅಂಕಿಅಂಶ ನಮ್ಮ ಮುಂದಿದೆ. ಚಲನಚಿತ್ರ ತಾರೆಗಳು , ಕ್ರಿಕೆಟ್ ಆಟಗಾರರು , ಇನ್ನಿತರ ಸೆಲಬ್ರೆಟಿಗಳನ್ನು ನೋಡಿ ಅವರಂತೆ ಬದುಕಬೇಕು ಎನ್ನುವ ಹುಚ್ಚು ಧಾವಂತಕ್ಕೆ ಇಂದಿನ ಜನತೆ ಬಿದ್ದಿದ್ದಾರೆ. ದೀರ್ಘಕಾಲದ ಹೂಡಿಕೆಗಳಲ್ಲಿ ಅವರಿಗೆ ನಂಬಿಕೆಯಿಲ್ಲದಂತಾಗಿದೆ. ಮೂವತ್ತು ವರ್ಷ ಹೂಡಿಕೆ ಮಾಡಿ ಎಂದರೆ ‘ಡೂಡ್ ಆರ್ ಯು ಕ್ರೇಜಿ?’ ಎನ್ನುತ್ತಾರೆ. ವಯಸ್ಸಿದ್ದಾಗ ಈ ಮಾತುಗಳು ಸಹಜ. ಸಮಯ ಎನ್ನುವುದು ಅತ್ಯಂತ ವೇಗವಾಗಿ ಕಳೆದುಹೋಗುತ್ತದೆ. ವೃದ್ಯಾಪ್ಯದ ಹೊಸ್ತಿನಲ್ಲಿ ಯವ್ವನದಲ್ಲಿ ಮಾಡಿದ ತಪ್ಪುಗಳು ಬಂದು ನಿಲ್ಲುತ್ತವೆ. ಜೀವನ ಪೂರ್ತಿ ಹಣಕ್ಕಾಗಿ ದುಡಿಯುವುದು ಸರಿಯಾದ ಮಾರ್ಗವಲ್ಲ. ಹೀಗಾಗಿ ಸ್ಟಾರ್ಟ್ ಅರ್ಲಿ. ಚಕ್ರಬಡ್ಡಿಯ ಪೂರ್ಣ ಶಕ್ತಿಯನ್ನು ಬಳಸಿಕೊಳ್ಳಬೇಕು ಎಂದರೆ ಸಾಧ್ಯವಾದಷ್ಟು ಬೇಗೆ ಹೂಡಿಕೆಯನ್ನು ಶುರು ಮಾಡಬೇಕು.
ಜಗತ್ತಿನಲ್ಲಿ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಹೂಡಿಕೆ ಮಾಡುವ ಅವಶ್ಯಕತೆ ಇಲ್ಲದಷ್ಟು ಹಣ ಬರುತ್ತದೆ. ಅದನ್ನೂ ಅವರು ಸರಿಯಾಗಿ ನಿಯಂತ್ರಿಸದಿದ್ದರೆ ಬೀದಿಗೆ ಬರುವುದನ್ನು ತಪ್ಪಿಸಲಾಗುವುದಿಲ್ಲ. ನಮ್ಮ ಅಮಿತಾಬ್ ಬಚ್ಚನ್, ಮೈಕ್ ಟೈಸನ್, ಅನೇಕ ಚಲನಚಿತ್ರ ನಟರನ್ನು ನಾವು ಉದಾಹರಿಸಬಹುದು. ಅಮಿತಾಬ್ ಅದರಿಂದ ಪಾಠ ಕಲಿತರು, ಬದುಕನ್ನು ಮತ್ತೆ ಕಟ್ಟಿಕೊಂಡದ್ದು, ಇಂದಿಗೂ ಅತಿ ಹೆಚ್ಚು ಶ್ರೀಮಂತ ನಟರ ಸಾಲಿನಲ್ಲಿರುವುದು ನಾವು ಕಾಣಬಹುದು. ಉಳಿದವರೆಲ್ಲಾ ಹೂಡಿಕೆ ಮಾಡಬೇಕು, ದೀರ್ಘಾವಧಿಯಲ್ಲಿ, ಚಕ್ರಬಡ್ಡಿಯ ಶಕ್ತಿಯಲ್ಲಿ ನಂಬಿಕೆಯಿಡಬೇಕು.
ಕೊನೆಮಾತು: ಭಾರತ ತೀವ್ರಗತಿಯಲ್ಲಿ ತನ್ನ ಪಥವನ್ನು ಬದಲಿಸುತ್ತಿದೆ. ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ. ಮಧ್ಯಮವರ್ಗ ಇನ್ನಷ್ಟು ಆದಾಯವನ್ನು ಹೆಚ್ಚಿಸಿಕೊಂಡು ಹೊಸ ಹುರುಪಿನಲ್ಲಿದೆ. ಬಡವರ ಸಂಖ್ಯೆಯಲ್ಲಿ ಕೂಡ ತೀವ್ರ ಕುಸಿತವಾಗಿದೆ. ಇವೆಲ್ಲವೂ ಮೆಚ್ಚಬೇಕಾದ , ನಾವು ಹೆಮ್ಮೆ ಪಡ ಬೇಕಾದ ಅಂಶಗಳು. ಆದರೆ ನಾವು ಈ ಬದಲಾವಣೆಯ ವೇಗಕ್ಕೆ ಹೊಂದಿಕೊಳ್ಳುವ ತರಾತುರಿಯಲ್ಲಿ ಸ್ವಲ್ಪ ಜಾರಿದರೂ ಕೂಡ ಸಾಲದ ಸುಳಿಯಲ್ಲಿ ಸಿಲುಕಿ ಬಿಡುತ್ತೇವೆ. ಮುಂದಿನ ಎರಡು ದಶಕ ನಮ್ಮದು ಎನ್ನುವ ವಿಶ್ವಾಸದೊಂದಿಗೆ ಭದ್ರವಾದ ಆದರೆ ಜಾಗರೂಕತೆಯ ಹೆಜ್ಜೆಯನ್ನು ನಾವು ಇರಿಸಬೇಕಾಗಿದೆ. ಆಗ ಮಾತ್ರ ಭಾರತ ಮುಂದುವರಿದ ದೇಶವಾದಾಗ ನಾವು ಕೂಡ ಸಂಭ್ರಮಿಸಬಹುದು. ದೇಶದ ಅಭಿವೃದ್ಧಿ ಜೊತೆ ಜೊತೆಗೆ ನಾವು ಹೆಜ್ಜೆ ಹಾಕಬೇಕು. ನಮ್ಮ ಆರ್ಥಿಕತೆಯನ್ನು ಭದ್ರ ಮಾಡಿಕೊಂಡರೆ ಅದು ಅಷ್ಟರಮಟ್ಟಿಗೆ ದೇಶಕ್ಕೂ ನೀಡಿದ ಕೊಡುಗೆಯಾಗುತ್ತದೆ.
-ರಂಗಸ್ವಾಮಿ ಮೂಕನಹಳ್ಳಿ