ಬಳ್ಳಾರಿ,ಫೆ.09 : ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಿಲ್ಲಾ ಚೇಂಬರ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ಗೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಶುಕ್ರವಾರ ಭೇಟಿ ನೀಡಿ, ವ್ಯವಸ್ಥೆಯನ್ನು ಪರಿಶೀಲನೆ ಮಾಡಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ರೈತಣ್ಣ ಊಟ, ರೈತಣ್ಣ ಕ್ಲಿನಿಕ್ ಮತ್ತು ರೈತಣ್ಣ ಹಾಸಿಗೆಯ ವಿಶೇಷಗಳನ್ನು ತಿಳಿದುಕೊಂಡು, ವಾಣಿಜ್ಯೋದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳಿಂದ ಕೂಡಿರುವ ಸಂಸ್ಥೆ ಜನಸೇವೆಯಲ್ಲಿ ತೊಡಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ನಲ್ಲಿ ಹೋಟಲ್ ಮ್ಯಾನೇಜ್ಮೆಂಟ್ ಕೋರ್ಸ್ ಹಾಗೂ ಇನ್ನಿತರೆ ವಿಷಯಗಳ ಕೋರ್ಸ್ಗಳನ್ನು ಪ್ರಾರಂಭಿಸಲು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ನಲ್ಲಿ ಹೊಸದಾಗಿ ಹೋಟಲ್ ಮ್ಯಾನೇಜ್ಮೆಂಟ್ ಕೋರ್ಸ್ ಪ್ರಾರಂಭಿಸಿ, ಹೋಟಲ್ ಉದ್ಯಮಕ್ಕೆ ಅಗತ್ಯವಿರುವ ಯುವ ಸಿಬ್ಬಂದಿಯನ್ನು ತರಬೇತಿ ನೀಡಿ, ಕೌಶಲ್ಯಪೂರ್ಣ ಉದ್ಯೋಗಿಗಳನ್ನು ನೀಡುವ ಕುರಿತು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಪ್ರಸ್ತಾವನೆ ಸಲ್ಲಿಸಿದರು. ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ನ ಕಾರ್ಯದಕ್ಷತೆ, ವಿವಿಧ ಕೋರ್ಸ್ಗಳು ಮತ್ತು ಉಚಿತ ತರಬೇತಿ ಪಡೆದವರ ಮಾಹಿತಿ ನೀಡಿದರು.
ಈ ವೇಳೆ ಜಿಲ್ಲಾ ಕೈಗಾರಿಕಾ ಕಚೇರಿಯ ನಿರ್ದೇಶಕ ಸೋಮಶೇಖರ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಪಿ.ಎಸ್.ಹಟ್ಟಪ್ಪ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಮಹಾರುದ್ರಗೌಡ, ಹಿರಿಯ ಉಪಾಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ, ಗೌರವ ಅಧ್ಯಕ್ಷ ಸಿ.ಶ್ರೀನಿವಾಸರಾವ್, ಗೌರವ ಕಾರ್ಯದರ್ಶಿ ಕೆ.ಸಿ.ಸುರೇಶಬಾಬು, ಜಂಟಿ ಕಾರ್ಯದರ್ಶಿ ಡಾ.ಮರ್ಚೇಡ್ ಮಲ್ಲಿಕಾರ್ಜುನ, ಉಪಾಧ್ಯಕ್ಷರುಗಳಾದ ಎ.ಮಂಜುನಾಥ್, ಎಸ್.ದೊಡ್ಡನಗೌಡ, ಜಂಟಿ ಕಾರ್ಯದರ್ಶಿಗಳಾದ ಡಾ.ಮರ್ಚೇಡ್ ಮಲ್ಲಿಕಾರ್ಜುನ, ವಿ.ರಾಮಚಂದ್ರ, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಇತರರು ಇದ್ದರು.