ನವದೆಹಲಿ: 1999ರಿಂದ 6 ಬಾರಿ ಲೋಕಸಭೆಗೆ ಆಯ್ಕೆಯಾಗುತ್ತಿರುವ ಕಾಂಗ್ರೆಸ್ನ ಹಿರಿಯ ನಾಯಕಿ ಸೋನಿಯಾ ಗಾಂಧಿ, ಇದೇ ಮೊದಲ ಬಾರಿಗೆ ಸಂಸತ್ತಿನ ಕೆಳಮನೆಯ ಲೋಕಸಭೆ ಬಿಟ್ಟು ಮೇಲ್ಮನೆಯಾದ ರಾಜ್ಯಸಭೆ ಪ್ರವೇಶಿಸುವ ಸಾಧ್ಯತೆ ಇದೆ. ಇನ್ನೊಂದೆಡೆ ಈವರೆಗೂ ಸೋನಿಯಾ ಪ್ರತಿನಿಧಿಸುತ್ತಿದ್ದ ಉತ್ತರಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
1999ರಲ್ಲಿ ಮೊದಲ ಬಾರಿ ಅಮೇಥಿ ಮತ್ತು ಕರ್ನಾಟಕದ ಬಳ್ಳಾರಿ ಎರಡೂ ಕಡೆಯಿಂದ ಗೆದ್ದಿದ್ದ ಸೋನಿಯಾ ನಂತರ 5 ಬಾರಿ ರಾಯ್ಬರೇಲಿಯಿಂದ ಲೋಕಸಭೆಗೆ ಆಯ್ಕೆ ಯಾಗಿದ್ದರು. ಆದರೆ ಕಳೆದ ಕೆಲ ಸಮಯ ದಿಂದ ವಯೋಸಹಜ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಸೋನಿಯಾ ಈ ಬಾರಿ ಲೋಕಸಭೆ ಬಿಟ್ಟು ರಾಜ್ಯಸಭೆ ಆಯ್ಕೆ ಮಾಡಿ ಕೊಳ್ಳಬಹುದು ಎಂದು ವರದಿಗಳು ತಿಳಿಸಿವೆ.
ಸೋನಿಯಾಗೆ ತಮ್ಮ ರಾಜ್ಯದಿಂದ ರಾಜ್ಯಸಭೆಗೆ ಪ್ರವೇಶ ಮಾಡುವಂತೆ ಈಗಾಗಲೇ ಕರ್ನಾಟಕ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಹಿಮಾಚಲಪ್ರದೇಶ ರಾಜ್ಯ ಕಾಂಗ್ರೆಸ್ ಘಟಕಗಳು ಆಹ್ವಾನ ನೀಡಿವೆ. ಈ ಪೈಕಿ ಅವರು ರಾಜಸ್ಥಾನ ಅಥವಾ ಹಿಮಾಚಲವನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಪ್ರಿಯಾಂಕಾ ಸ್ಪರ್ಧಾ ಕಣಕ್ಕೆ?: ಇನ್ನು ಪ್ರಿಯಾಂಕಾ ವಾದ್ರಾ ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಇದಕ್ಕಾಗಿ ಅವರು ತಮ್ಮ ತಾಯಿ ಪ್ರತಿನಿಧಿಸುವ ರಾಯ್ಬರೇಲಿ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಕಳೆದ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ವಾರಾಣಸಿಯಿಂದ ಪ್ರಿಯಾಂಕಾ ಕಣಕ್ಕೆ ಇಳಿಯಲಿದ್ದಾರೆ ಎಂದು ವರದಿಯಾಗಿತ್ತಾದರೂ ಹಾಗೆ ಆಗಿರಲಿಲ್ಲ.