ಕೊಟ್ಟೂರು ಫೆ 14: ಅವರಾತ್ರಿ ಅಮವಾಸೆ ದಿನ ಸೇರಿ ಐದನೇ ದಿನವಾದ ಫೆ 14 ರ ಬುಧವಾರ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ತೇರುಗಡ್ಡೆ ಹೊರ ಹಾಕಲಾಯಿತು.
ಇಂದು ಬೆಳಿಗ್ಗೆಯಿಂದಲೇ ಮಠದ ಸಿಬ್ಬಂದಿ ತೇರುಗಡ್ಡೆಯನ್ನು ಸ್ವಚ್ಛಗೊಳಿಸಿ ಸಂಜೆ 4 ಗಂಟೆ ಸುಮಾರಿಗೆ ತೇರುಗಡ್ಡೆ ಹೊರ ಹಾಕಲು ಸಕಲಸಿದ್ದತೆ ಮಾಡಲಾಗಿತ್ತು. ಸಮಯಕ್ಕೆ ಸರಿಯಾಗಿ ಸಾವಿರಾರು ಭಕ್ತರು ತೇರುಗಡ್ಡೆ ಬಳಿ ಜಮಾಯಿಸಿದ್ದು ದೃಶ್ಯ ಕಂಡುಬಂದಿತ್ತು.
ಶ್ರೀ ಕೊಟ್ಟೂರು ದೇವರು ಶಿವಪ್ರಕಾಶ ಸ್ವಾಮಿಜೀ ಹಾಗೂ ಅರ್ಚಕರು ತೇರುಗಡ್ಡೆ ಏರಿಕುಳಿತ ನಂತರ ಭಕ್ತ ಸಮೂಹ ತೇರುಗಡ್ಡೆಯನ್ನು ಎಳೆದುಕೊಂಡು ಹೋಗಿ ತೇರುಬಯಲಿನಲ್ಲಿ ಸಂಜೆ 5.15ರ ಸಮಯಕ್ಕೆ ನೆಲೆನಿಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಕಲ ಮಂಗಳವಾದ್ಯಗಳೊಂದಿಗೆ , ಭಕ್ತಾದಿಗಳಿಂದ ಸಂಭ್ರಮ ಜೋರಾಗಿತ್ತು.
ತೇರುಗಡ್ಡೆಗೆ ರಥೋತ್ಸವ ಪೂರ್ವ ಕಾರ್ಯಕ್ರಮವನ್ನು ಇಂದು ರಾತ್ರಿ 10.30 ಸುಮಾರಿಗೆ ತೇರುಗಡ್ಡೆಗೆ ಮಠದ ಕಡೆಯಿಂದ ಪೂಜೆ ಸಲ್ಲಿಸಲಾಗುವುದು, ಈ ಸಂದರ್ಭದಲ್ಲಿ ಸಂತಾನ ವಿಲ್ಲದ ದಂಪತಿಗಳು ಹಿಂದಿನ ವರ್ಷ ತೇರುಗಡ್ಡೆಗೆ ಕಟ್ಟಿದ್ದ ಹೂವಿನ ತೋಟ್ಟಿಲು ತೆಗೆದುಕೊಂಡು ಹೋಗಿ ಮನೆಯಲ್ಲಿ ಪೂಜೆ ಸಲ್ಲಿಸುತ್ತಾರೆ,ಅಂಥವರು ಮಕ್ಕಳ ಸೌಭಾಗ್ಯ ಪಡೆದಿದ್ದಾರೆ, ಅಂತಹ ದಂಪತಿಗಳು ಇಂದು ತೇರುಗಡ್ಡೆ ಬಳಿ ಬಂದು ಬಾಳೆದಿಂಡು ಅಥವಾ ಹೂವಿನ ಮೂಲಕ ಮಾಡಿದ ತೋಟ್ಟಿಲನ್ನು ಒಪ್ಪಿಸುವುದು ಇಲ್ಲಿ ಇರುವ ಒಂದು ಸಂಸ್ಕೃತಿಯಾಗಿದೆ ಎಂದರು.
ತೇರುಗಡ್ಡೆ ಪೂಜೆ ನಂತರ ಅಲ್ಲಿ ನೆರೆದಿದ್ದ ಭಕ್ತಾದಿಗಳಿಗೆ ಗುಗ್ಗರಿ ಕಾಳು ವಿತರಣೆ ಮಾಡುವ ಪರಿಪಾಠವು ಈ ಧಾರ್ಮಿಕ ಕಾರ್ಯದಲ್ಲಿ ಕಂಡುಬಂದಿತ್ತು ಧರ್ಮಕರ್ತರು, ಕಟ್ಟಿಮನಿ ಧೈವದವರು, ನೂರಾರು ಭಕ್ತರು ಈ ಪೂಜಾ ಸಂದರ್ಭದಲ್ಲಿದ್ದರು.