ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮಂಡನೆ ಮಾಡುತ್ತಿರುವ 15ನೇ ಬಜೆಟ್ ಇದಾಗಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಬಜೆಟ್ ಮೇಲಿನ ನಿರೀಕ್ಷೆ, ಕುತೂಹಲಗಳೂ ಹೆಚ್ಚಾಗಿವೆ. ಬಜೆಟ್ ಮಂಡನೆಯ ಕ್ಷಣಕ್ಷಣದ ಮಾಹಿತಿ ಇಲ್ಲಿ ಲಭ್ಯ.
ಮೀನುಗಾರರ ರಕ್ಷಣೆಗೆ ಸಮುದ್ರ ಆಂಬುಲೆನ್ಸ್: ಸಿಎಂ ಘೋಷಣೆ
ಮೀನುಗಾರಿಕೆ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಬಜೆಟ್ನಲ್ಲಿ 3 ಸಾವಿರ ಕೋಟಿ ಯೋಜನೆ ಘೋಷಿಸಿದ್ದಾರೆ. ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರನ್ನು ತುರ್ತು ಸಂದರ್ಭಗಳಲ್ಲಿ ರಕ್ಷಣೆಗೆ ಮಾಡುವುದಕ್ಕಾಗಿ ಅತ್ಯಾಧುನಿಕ ಸಮುದ್ರ ಆಂಬುಲೆನ್ಸ್ ಖರೀದಿಸಲಾಗುವುದು ಎಂದು ಅವರು ಘೋಷಣೆ ಮಾಡಿದ್ದಾರೆ.
ಹೊನ್ನಾವರ ಅಥವಾ ಕಾಸರಗೋಡದಲ್ಲಿ ಮೀನುಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲಾಗುವುದು. ಭದ್ರಾವತಿಯಲ್ಲಿ ಹೈಟೆಕ್ ಮೀನು ಮಾರುಕಟ್ಟೆ ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಘೋಷಣೆ ಮಾಡಿದರು.
ಬಿಜೆಪಿ ನಾಯಕರ ಸಭಾತ್ಯಾಗ
ವಿಪಕ್ಷ ಬಿಜೆಪಿ ನಾಯಕರು ಬಜೆಟ್ಗೆ ಬಹಿಷ್ಕಾರ ಹಾಕಿ ಹೊರನಡೆದರು. ಧಿಕ್ಕಾರ ಕೂಗುತ್ತಾ ಸದನದಿಂದ ಹೊರಬಂದ ಬಿಜೆಪಿ ಶಾಸಕರು, ‘ಏನಿಲ್ಲಾ ಏನಿಲ್ಲಾ, ಬುರುಡೆ ಬುರುಡೆ’ ಎಂದು ಕೂಗುತ್ತಾ ಸಭಾತ್ಯಾಗ ಮಾಡಿದರು. ವಿಧಾನಸಭೆ ಪ್ರವೇಶದ್ವಾರದ ಬಾಗಿಲಿಗೆ ಬಿಜೆಪಿ ಶಾಸಕರು ಪೋಸ್ಟರ್ ಅಂಟಿಸಿದರು.
ವಿಜಯಪುರ ಜಿಲ್ಲೆಯಲ್ಲಿ ತೋಟಗಾರಿಕೆ ಕಾಲೇಜು
ತೋಟಗಾರಿಕೆ ಬೆಳೆಗಳಿಗೆ ವಿಜಯಪುರ ಜಿಲ್ಲೆಯು ಹೆಸರುವಾಸಿಯಾಗಿದೆ. ಈ ಭಾಗದಲ್ಲಿ ತೋಟಗಾರಿಕೆ ಬೆಳೆಗಳಿಗೆ ಇನ್ನಷ್ಟು ಉತ್ತೇಜನ ನೀಡಲು ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ತೋಟಗಾರಿಕೆ ಕಾಲೇಜನ್ನು ಸ್ಥಾಪಿಸಲಾಗುವುದು ಎಂದು ಸಿಎಂ ಘೋಷಣೆ ಮಾಡಿದರು.
ಏಷ್ಯಾದಲ್ಲಿಯೇ ಅತಿ ಹೆಚ್ಚು ರೇಷ್ಮೆಗೂಡು ಮಾರಾಟ ವಹಿವಾಟು ನಡೆಸುವ ರಾಮನಗರ ಮತ್ತು ಶಿಡ್ಲಘಟ್ಟದಲ್ಲಿರುವ ರೇಷ್ಮೆ ಮಾರುಕಟ್ಟೆಗಳನ್ನು ಮೊದಲನೇ ಹಂತದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಹೈ-ಟೆಕ್ ಮಾರುಕಟ್ಟೆಗಳನ್ನಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಕ್ರಮವಹಿಸಲಾಗಿದೆ. ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ 250 ಕೋಟಿ ರೂ. ವೆಚ್ಚದಲ್ಲಿ ಎರಡನೇ ಹಂತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ರಾಜ್ಯದ ಮೂರು ಜಿಲ್ಲೆಗಳಲ್ಲಿ ಆಹಾರ ಪಾರ್ಕ್
ರಾಜ್ಯದ ಮೂರು ಜಿಲ್ಲೆಗಳಲ್ಲಿ ಆಹಾರ ಪಾರ್ಕ್ ನಿರ್ಮಾಣ ಮಾಡಲಾಗುವುದು. ಶಿವಮೊಗ್ಗದ ಸೋಗಾನೆ, ವಿಜಯಪುರದ ಇಟ್ಟಂಗಿಹಾಳ, ಬೆಂಗಳೂರು ಗ್ರಾ. ಜಿಲ್ಲೆ ಮೂಗೆನಹಳ್ಳಿ ಬಳಿ ಆಹಾರ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.
ಬೆಂಗಳೂರು ಬಿಸಿನೆಸ್ ಕಾರಿಡರ್ ರೂಪಿಸಲು ಬಜೆಟ್ನಲ್ಲಿ ನಿರ್ಧಾರ
ಬೆಂಗಳೂರು ಬಿಸಿನೆಸ್ ಕಾರಿಡರ್ ರೂಪಿಸಲು ಬಜೆಟ್ನಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. 73 ಕಿ.ಮೀ ಉದ್ದದ ರಸ್ತೆಯನ್ನು 27 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ಪಿಪಿಪಿ ಮಾದರಿಯಲ್ಲಿ ಆರ್ಎಫ್ಪಿ ಕರೆಯಲಾಗುವುದು. ಬೆಂಗಳೂರಿನಲ್ಲಿ 250 ಮೀಟರ್ ಎತ್ತರದ ಸ್ಕೈಡೆಕ್ ನಿರ್ಮಾಣ ಮಾಡಲಾಗುವುದು. ಬೆಂಗಳೂರಿನಲ್ಲಿ ಆಕರ್ಷಕ ಪ್ರವಾಸಿ ತಾಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು. ನಗರಾಭಿವೃದ್ಧಿ ಅಂಗಸಂಸ್ಥೆ ಬಿಬಿಎಂಪಿ, ಬಿಎಂಆರ್ಸಿಎಲ್, ಬಿಡಬ್ಲ್ಯುಎಸ್ಎಸ್ಬಿ, ಬಿಡಿಎನಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗುವುದು. 2025ರೊಳಗೆ 44 ಕಿ.ಮೀ ಮೆಟ್ರೋ ಮಾರ್ಗ ಸೇರ್ಪಡೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದರು.
ಕೇಂದ್ರ ವಿರುದ್ಧ ಟೀಕೆಗೆ ಪ್ರತಿಪಕ್ಷ ಕಿಡಿ: ಬಜೆಟ್ ಮಂಡನೆ ವೇಳೆ ಗದ್ದಲ
ಬಜೆಟ್ ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದು, ಪ್ರತಿಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಬಜೆಟ್ ಅನ್ನು ಕೇಂದ್ರದ ವಿರುದ್ಧ ಟೀಕೆಗೆ ಬಳಸಿಕೊಳ್ಳುತ್ತೀರಾ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಕಿಡಿ ಕಾರಿದರು. ಈ ವೇಳೆ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಸ್ಪೀಕರ್ ಯುಟಿ ಖಾದರ್ ಪರಿಪರಿಯಾಗಿ ಬೇಡಿಕೊಂಡರೂ ಪ್ರತಿಪಕ್ಷ ನಾಯಕರು ಆಕ್ರೋಶದ ಮಾತುಗಳನ್ನು ಕಡಿಮೆ ಮಾಡಲಿಲ್ಲ.
ಮದ್ಯದ ದರ ಮತ್ತೆ ಹೆಚ್ಚಳ: ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ
ಮದ್ಯದ ಘೋಷಿತ ಸ್ಲಾಬ್ಗಳನ್ನು ತರ್ಕಬದ್ಧಗೊಳಿಸುವ ಮೂಲಕ ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ IML, ಬಿಯರ್ ಸ್ಲಾಬ್ ಪರಿಷ್ಕರಣೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಿಸಿದರು. 2023-24ನೇ ಸಾಲಿನ ಜನವರಿ ತಿಂಗಳ ಅಂತ್ಯದವರೆಗೆ, ಅಬಕಾರಿ ತೆರಿಗೆಯಿಂದ 28,181 ಕೋಟಿ ರೂ.ಗಳು ಸ್ವೀಕೃತವಾಗಿರುತ್ತದೆ. 2024-25ನೇ ಸಾಲಿಗೆ 38,525 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಎಸ್ಟಿ ಸಂಗ್ರಹದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ
2023-24ರಲ್ಲಿ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಒಟ್ಟು ಜಿ.ಎಸ್.ಟಿ ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ರಾಜ್ಯವು 2ನೇ ಸ್ಥಾನದಲ್ಲಿದೆ. ಜನವರಿ ತಿಂಗಳ ಅಂತ್ಯದವರೆಗು 58,180 ಕೋಟಿ ರೂ.ಗಳ SGST ತೆರಿಗೆ ಸ್ವೀಕೃತವಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಶೇ.14 ರಷ್ಟು ಬೆಳವಣಿಗೆಯಾಗಿರುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಂದ ಜನರ ಆದಾಯ ಹೆಚ್ಚಳ: ಸಿಎಂ ಸಿದ್ದರಾಮಯ್ಯ
ತೆರಿಗೆ ಸಂಗ್ರಹದಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ. ಗ್ಯಾರಂಟಿ ಯೋಜನೆಗಳಿಂದ ಜನರ ಆದಾಯ ಹೆಚ್ಚಳವಾಗಿದೆ. ಇದರ ಪರಿಣಾಮ ತೆರಿಗೆ ಸಂಗ್ರಹ ಹೆಚ್ಚಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಎಲ್ಲರನ್ನೂ ಒಳಗೊಂಡ ಬಜೆಟ್ ನಮ್ಮದು: ಸಿಎಂ
ಗ್ಯಾರಂಟಿ ಯೋಜನೆಗಳು ಕೇವಲ ಚುನಾವಣಾ ಗಿಮಿಕ್ ಅಲ್ಲ. 5 ಗ್ಯಾರಂಟಿ ಜಾರಿಯಿಂದ ಇಡೀ ಜಗತ್ತು ರಾಜ್ಯದತ್ತ ನೋಡುತ್ತಿದೆ. ಶಕ್ತಿ ಯೋಜನೆಯಿಂದ ಮಹಿಳೆಯರು ಸಂತಸಗೊಂಡಿದ್ದಾರೆ. 5 ಗ್ಯಾರಂಟಿ ಜಾರಿಯಿಂದ ಸರ್ಕಾರದಲ್ಲಿ ಹಣವಿಲ್ಲ ಎಂದು ಸುಳ್ಳು ಹೇಳ್ತಿದ್ದಾರೆ. ಕೇಂದ್ರ ಸರ್ಕಾರ ಮಾಡದ್ದನ್ನು ನಾವು ಮಾಡಿದ್ದೇವೆ. ಬಿಟ್ಟಿ ಗ್ಯಾರಂಟಿ, ದಿವಾಳಿ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಎಲ್ಲರನ್ನೂ ಒಳಗೊಂಡಂತೆ ರಾಜ್ಯ ಅಭಿವೃದ್ಧಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಬಜೆಟ್ನ ಒಟ್ಟು ಗಾತ್ರ 3,71,383 ಕೋಟಿ ರೂ.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳು ಸೀಮಿತವಾಗಿರುವುದಿಲ್ಲ ಎಂದ ಸಿದ್ದರಾಮಯ್ಯ ಬಜೆಟ್ ಮಂಡನೆಯ ಆರಂಭದಲ್ಲೇ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಪಕ್ಷಗಳ ಟೀಕೆಯನ್ನು ಉಲ್ಲೇಖಿಸಿದರು. ಬಜೆಟ್ನ ಒಟ್ಟು ಗಾತ್ರ 3,71,383 ಕೋಟಿ ರೂ. ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳು ಚುನಾವಣಾ ಗಿಮಿಕ್ ಅಲ್ಲ: ಸಿಎಂ ಸಿದ್ದರಾಮಯ್ಯ
ಕಾಂಗ್ರೆಸ್ ಸರ್ಕಾರ ರೂಪಿಸಿರುವ ಗ್ಯಾರಂಟಿ ಯೋಜನೆಗಳು ಚುನಾವಣಾ ಗಿಮಿಕ್ಗಳಲ್ಲ. ಬಡವರ ಏಳಿಗೆಗಾಗಿ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕೈಗೊಂಡಿದೆ. ಗ್ಯಾರಂಟಿ ಜಾರಿಗಾಗಿ ಇಡೀ ಜಗತ್ತು ನಮ್ಮತ್ತ ತಿರುಗಿ ನೋಡುತ್ತಿವೆ. ಹಲವು ದೇಶಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು ನಮ್ಮ ಯೋಜನೆಗಳ ಬಗ್ಗೆ ಅಧ್ಯಯನ ನಡೆಸಿವೆ: ಸಿದ್ದರಾಮಯ್ಯ
ಆಗದು ಎಂದು ಕೈಕಟ್ಟಿ ಕುಳಿತರೆ…
ಸದನದಲ್ಲಿ ಸಿಎಂ ಸಿದ್ದರಾಮಯ್ಯ 15ನೇ ಆಯವ್ಯಯ ಮಂಡನೆ. ಶರಣಚಿಂತನೆಯನ್ನ ಓದಿ ಹೇಳಿದ ಸಿಎಂ, ‘ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ’ ಎಂಬ ಡಾ.ರಾಜ್ ಕುಮಾರ್ ಹಾಡಿನ ಸಾಲು ಉಲ್ಲೇಖಿಸಿದರು.
15ನೇ ಬಜೆಟ್ ಮಂಡನೆ ಮಾಡುತ್ತಿದ್ದೇನೆ: ಸಿದ್ದರಾಮಯ್ಯ
ದೇಶ ಗಣರಾಜ್ಯವಾಗಿ 75ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಸುಸಂದರ್ಭದಲ್ಲಿ ನನ್ನ 15ನೇ ಆಯವ್ಯಯ ಮಂಡನೆ ಮಾಡುತ್ತಿದ್ದೇನೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಸಾಮಾಜಿಕ ಸಮಾನತೆಯ ಉದ್ದೇಶದೊಂದಿಗೆ ಈ ಬಜೆಟ್ ಮಂಡನೆ ಮಾಡುತ್ತಿದ್ದೇನೆ.
ಸದನದಲ್ಲಿ ಪ್ಲಕಾರ್ಡ್ ಪ್ರದರ್ಶನಕ್ಕೆ ಮುಂದಾದ ಬಿಜೆಪಿ ಶಾಸಕರಿಗೆ ತಡೆ
ಬಜೆಟ್ ಮಂಡನೆ ವೇಳೆ ಸದನದಲ್ಲಿ ಪ್ಲಕಾರ್ಡ್ ಪ್ರದರ್ಶನಕ್ಕೆ ಬಿಜೆಪಿ ಮುಂದಾಗಿದೆ. ಆದರೆ, ಪ್ಲಕಾರ್ಡ್ಗಳನ್ನು ಒಳಗೆ ತೆಗೆದುಕೊಂಡು ಹೋಗಲು ಮಾರ್ಷಲ್ಗಳು ಬಿಡಲಿಲ್ಲ. ಹೀಗಾಗಿ ಪೋಸ್ಟರ್ ಪ್ರದರ್ಶನಕ್ಕೆ ವಿಪಕ್ಷ ಬಿಜೆಪಿ ಸಿದ್ಧತೆ ಮಾಡಿದೆ. ಬಿಜೆಪಿ ಶಾಸಕರು ಪೋಸ್ಟರ್ ಗಳನ್ನು ತೆಗೆದುಕೊಂಡು ಬಂದಿದ್ದಾರೆ. ‘ಏನಿಲ್ಲಾ ಏನಿಲ್ಲಾ ಬಜೆಟ್ನಲ್ಲಿ ಹೇಳಿರುವುದೆಲ್ಲಾ ನಿಜವಲ್ಲ’ ಎಂದು ಬರೆಯಲ್ಪಟ್ಟಿರುವ ಪೋಸ್ಟರ್ಗಳನ್ನು ಬಿಜೆಪಿ ಶಾಸಕರು ತಂದಿದ್ದಾರೆ.
ಬಜೆಟ್ ಮಂಡನೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ
ಸಂಪುಟ ಸಹೋದ್ಯೋಗಿಗಳಿಂದ ಬಜೆಟ್ಗೆ ಅನುಮೋದನೆ ಪಡೆದುಕೊಂಡ ಸಿಎಂ ಸಿದ್ದರಾಮಯ್ಯ ವಿಧಾನಸಭೆ ಕಲಾಪಕ್ಕೆ ಆಗಮಿಸಿದರು. ಇದರ ಬೆನ್ನಲ್ಲೇ ವಿಧಾನಸಭಾ ಕಲಾಪ ಆರಂಭವಾಯಿತು. ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣ ಆರಂಭಿಸಿದರು. ಸಿಎಂ ಸಿದ್ದರಾಮಯ್ಯ 15ನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ.
ಬಜೆಟ್ಗೆ ಅನುಮೋದನೆ ಪಡೆದ ಸಿಎಂ ಸಿದ್ದರಾಮಯ್ಯ
ವಿಧಾನಸೌಧದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ಗೆ ಅನುಮೋದನೆ ಪಡೆದರು. ವಿಶೇಷ ಸಚಿವ ಸಂಪುಟ ಸಭೆಗೆ ಡಿಸಿಎಂ ಡಿಕೆ ಶಿವಕುಮಾರ್ ತಡವಾಗಿ ಆಗಮಿಸಿದರು.
ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ: ಕೆಲವೇ ಹೊತ್ತಿನಲ್ಲಿ ಸಂಪುಟ ಸಭೆ
ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಕೆಲವೇ ಹೊತ್ತಿನಲ್ಲಿ ಸಿಎಂ ನೇತೃತ್ವದಲ್ಲಿ ಸಂಪುಟ ಸಭೆ ಆರಂಭವಾಗಲಿದ್ದು, ಬಜೆಟ್ಗೆ ಸಿದ್ದರಾಮಯ್ಯ ಅನುಮೋದನೆ ಪಡೆಯಲಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಬಜೆಟ್ ಪ್ರತಿ ಹಸ್ತಾಂತರಿಸಿದ ಅಧಿಕಾರಿಗಳು
ಕೆಲವೇ ಹೊತ್ತಿನಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ಕಾವೇರಿ ನಿವಾಸದಲ್ಲಿ ಅಧಿಕಾರಿಗಳು ಅವರಿಗೆ ಬಜೆಟ್ ಪ್ರತಿ ಹಸ್ತಾಂತರಿಸಿದರು.
ಕೆಲವೇ ಹೊತ್ತಿನಲ್ಲಿ ಬಜೆಟ್ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ
ಕೆಲವೇ ಹೊತ್ತಿನಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಲು ಕಾವೇರಿ ನಿವಾಸಕ್ಕೆ ಸಚಿವರು, ಶಾಸಕರು ಆಗಮಿಸುತ್ತಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ದೊರೆಯುವ ತೆರಿಗೆ ಪಾಲಿನ ವಿವರ
ಪ್ರಸಕ್ತ ಸಾಲಿನಲ್ಲಿ ಅಂದರೆ, 2024 25 ನೇ ಸಾಲಿನಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ದೊರೆಯುವ ತೆರಿಗೆ ಪಾಲಿನ ವಿವರ
ಐದು ರಾಜ್ಯಗಳು ಹೆಚ್ಚಿನ ತೆರಿಗೆ ಪಾಲು ಪಡೆಯುತ್ತಿದೆ. ಉತ್ತರ ಪ್ರದೇಶ 2,18,816 ಕೋಟಿ, ಬಿಹಾರ 1,22,685 ಕೋಟಿ, ಮಧ್ಯಪ್ರದೇಶ 95,752 ಕೋಟಿ, ಪಶ್ಚಿಮಬಂಗಾಳ 91,764 ಕೋಟಿ, ಮಹಾರಾಷ್ಟ್ರ 77,053 ಕೋಟಿ ರೂಪಾಯಿ.
ದಕ್ಷಿಣ ಭಾರತದ ರಾಜ್ಯಗಳಿಗೆ ದೊರೆಯುವ ಕೇಂದ್ರದ ಪಾಲು
ಆಂಧ್ರಪ್ರದೇಶ 49,364 ಕೋಟಿ, ತಮಿಳುನಾಡು 49,754 ಕೋಟಿ, ಕರ್ನಾಟಕ 44,485 ಕೋಟಿ ರೂಪಾಯಿ.
2022 23ನೇ ಸಾಲಿನಲ್ಲಿ ಉತ್ತರ ಭಾರತದ ರಾಜ್ಯಗಳು ಪಡೆಯುತ್ತಿರುವ ವಿವರಗಳು
2022 23ನೇ ಸಾಲಿನಲ್ಲಿ ಉತ್ತರ ಭಾರತದ ರಾಜ್ಯಗಳು ಪಡೆಯುತ್ತಿರುವ ವಿವರಗಳು
ಉತ್ತರ ಪ್ರದೇಶ 1,69,745 ಕೋಟಿ, ಬಿಹಾರ 95,509 ಕೋಟಿ, ಮಧ್ಯಪ್ರದೇಶ 74,542 ಕೋಟಿ, ಪಶ್ಚಿಮಬಂಗಾಳ 71,434 ಕೋಟಿ, ಮಹಾರಾಷ್ಟ್ರ 60,000 ಕೋಟಿ ರೂಪಾಯಿ.
2022 23 ನೇ ಸಾಲಿನಲ್ಲಿ ದಕ್ಷಿಣ ಭಾರತದ ರಾಜ್ಯಗಳು ಪಡೆಯುತ್ತಿರುವ ತೆರಿಗೆ ಪಾಲಿನ ವಿವರ
ಆಂಧ್ರಪ್ರದೇಶ 38,176 ಕೋಟಿ, ತಮಿಳುನಾಡು 38,731 ಕೋಟಿ, ಕರ್ನಾಟಕ 34,596 ಕೋಟಿ, ತೆಲಂಗಾಣ 19,605 ಕೋಟಿ ರೂಪಾಯಿ.
ತೆರಿಗೆ ಪಾಲುಗಳ ಬಗ್ಗೆ ಬಜೆಟ್ನಲ್ಲಿ ಉಲ್ಲೇಖ
ಉತ್ತರ ಭಾರತದ ರಾಜ್ಯಗಳು ಎಷ್ಟು ತೆರಿಗೆ ಪಾಲು ಪಡೆದಿವೆ, ದಕ್ಷಿಣ ಭಾರತದ ರಾಜ್ಯಗಳು ಎಷ್ಟು ತೆರಿಗೆ ಪಾಲು ಪಡೆದಿವೆ ಎಂದು ಬಜೆಟ್ನಲ್ಲಿ ಉಲ್ಲೇಖ ಮಾಡುವ ಸಾಧ್ಯತೆ ಇದೆ. 2018-19 ಸಾಲಿನಲ್ಲಿ ಉತ್ತರ ಭಾರತ ಪಡೆದ ಪಾಲುಗಳನ್ನು ನೋಡುವುದಾದರೆ, ಉತ್ತರಪ್ರದೇಶ – 1,36,766 ಕೋಟಿ, ಬಿಹಾರ – 73,602 ಕೋಟಿ, ಮಧ್ಯಪ್ರದೇಶ- 57486 ಕೋಟಿ, ಪಶ್ಚಿಮ ಬಂಗಾಳ 55,775 ಕೋಟಿ, ಮಹಾರಾಷ್ಟ್ರ 42050 ಕೋಟಿ ರೂ. ಪಡೆದಿದೆ.
2018-2019 ರಲ್ಲಿ ದಕ್ಷಿಣ ಭಾರತದ ರಾಜ್ಯಗಳು ಪಡೆದಿರುವ ತೆರಿಗೆ ವಿವರಗಳನ್ನು ನೋಡುವುದಾದರೆ, ಆಂಧ್ರ ಪ್ರದೇಶ 32,787 ಕೋಟಿ, ತಮಿಳುನಾಡು 30,638 ಕೋಟಿ, ಕರ್ನಾಟಕ 35,894 ಕೋಟಿ, ತೆಲಂಗಾಣ 18,560 ಕೋಟಿ ರೂ. ಆಗಿದೆ.
ಮದ್ಯ ಪ್ರಿಯಕರಿಗೆ ಶಾಕ್ ನೀಡುತ್ತಾ ಸರ್ಕಾರ?
ಗ್ಯಾರಂಟಿ ಯೋಜನೆಗಳ ಜೊತೆಗೆ ಹೊಸ ಯೋಜನೆಗಳನ್ನು ನೀಡುವ ದೊಡ್ಡ ಸವಾಲು ಸಿದ್ದರಾಮಯ್ಯ ಮುಂದೆ ಇದ್ದು, ಬಜೆಟ್ ಗಾತ್ರ ಮತ್ತು ಸಾಲದ ಹೊರೆ ಹೆಚ್ಚಾಗಲಿದೆ. ಬಜೆಟ್ನಲ್ಲಿ ಮದ್ಯದ ಮೇಲಿನ ಸುಂಕವನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ. ಆ ಮೂಲಕ ಆದಾಯ ಕ್ರೋಢೀಕರಣಕ್ಕೆ ಸಿದ್ದರಾಮಯ್ಯ ಕ್ರಮಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ದಾಖಲೆಯ ಬಜೆಟ್ನಲ್ಲಿ ಸಿಹಿ ನೀಡುತ್ತಾರಾ ಸಿದ್ದರಾಮಯ್ಯ?
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಬಜೆಟ್ನಲ್ಲಿ ಮಹತ್ವದ ಘೋಷಣೆಗಳು ಹೊರಬೀಳುವ ನಿರೀಕ್ಷೆಗಳೂ ಇವೆ. ಈ ಬಾರಿ ಬಜೆಟ್ ಗಾತ್ರ ಸುಮಾರು 50 ಸಾವಿರ ಕೋಟಿ ರೂಪಾಯಿ ಹೆಚ್ಚಳವಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು (ಫೆಬ್ರವರಿ 16, ಶುಕ್ರವಾರ) ಕರ್ನಾಟಕದ 2024-25ನೇ ಸಾಲಿನ ಬಜೆಟ್ (Karnataka Budget) ಮಂಡನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 15ನೇ ಬಜೆಟ್ ಇದಾಗಿದೆ. ಹೀಗಾಗಿ ಅವರ ಪಾಲಿಗೆ ಇದೊಂದು ಮಹತ್ವದ ಕ್ಷಣ. ಮತ್ತೊಂದೆಡೆ ಲೋಕಸಭೆ ಚುನಾವಣೆಯೂ ಸಮೀಪಿಸುತ್ತಿದ್ದು, ಬಜೆಟ್ ಮೇಲಿನ ನಿರೀಕ್ಷೆಗಳು ಹೆಚ್ಚಾಗಿವೆ. ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿಗಳ ಕಾರಣ ಈ ಬಾರಿ ಬಜೆಟ್ ಗಾತ್ರ ಹೆಚ್ಚಾಗುವ ಸಾಧ್ಯತೆ ಇದೆ. ಅದೇ ರೀತಿ ಸಾಲದ ಪ್ರಮಾಣವೂ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಲೋಕಸಭೆ ಚುನಾವಣೆಯ ಕಾರಣ ಆರ್ಥಿಕ ಹೊರೆ ಆಗದಂತೆ ಜನಪ್ರಿಯ ಬಜೆಟ್ ಮಂಡನೆ ಮಾಡಬೇಕಾದ ಅನಿವಾರ್ಯತೆಯೂ ಸಿದ್ದರಾಮಯ್ಯ ಮುಂದಿದೆ. 5 ಗ್ಯಾರಂಟಿಗಳಿಗೆ 58 ಸಾವಿರ ಕೋಟಿ ಮೀಸಲು ಅನಿವಾರ್ಯವಾಗಿದೆ. ಗ್ಯಾರಂಟಿ ಯೋಜನೆಗಳಿಗಾಗಿ ತೆರಿಗೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಆದಾಗ್ಯೂ, ತೆರಿಗೆ ಹೆಚ್ಚಳ ಮಾಡದೆ ಬಜೆಟ್ ಮಂಡಿಸುವ ಸವಾಲು ಕೂಡ ಅವರ ಮುಂದಿದೆ.
ಕಳೆದ ಬಾರಿ ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂಪಾಯಿ ಇತ್ತು. ಈ ಬಾರಿ 3.50 ಲಕ್ಷ ಕೋಟಿ ಅಥವಾ 3.80 ಲಕ್ಷ ಕೋಟಿ ತಲುಪುವ ಸಾಧ್ಯತೆ ಇದೆ. ಕಳೆದ ಬಜೆಟ್ನಲ್ಲಿ 85,815 ಕೋಟಿ ರೂ. ಸಾಲದ ಮೊರೆ ಹೋಗಿತ್ತು ಸರ್ಕಾರ. ಈ ಬಾರಿ ಅಂದಾಜು 1 ಲಕ್ಷ ಕೋಟಿಗೆ ಸಾಲ ಹೆಚ್ಚಾಗುವ ಸಾಧ್ಯತೆ ಇದೆ.