ನವದೆಹಲಿ: ದೆಹಲಿಯ ಅಲಿಪುರದ ಬಣ್ಣದ ಕಾರ್ಖಾನೆಯೊಂದರಲ್ಲಿ ಬೆಂಕಿ ಹತ್ತಿಕೊಂಡು ಉರಿದು ಮೃತಪಟ್ಟ ಕಾರ್ಮಿಕರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಅಲಿಪುರದ ದಯಾಲ್ಪುರ ಮಾರುಕಟ್ಟೆಯಲ್ಲಿರುವ ಕಾರ್ಖಾನೆಯ ಆವರಣದಿಂದ 11 ಮಂದಿಯ ಶವಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಅಗ್ನಿಶಾಮಕ ಸೇವೆಗಳ (DFS) ಅಧಿಕಾರಿಯು ಘಟನೆಯ ಬಗ್ಗೆ ವಿವರಿಸುತ್ತಾ ಸಾಯಂಕಾಲ 5:25 ಕ್ಕೆ ಕರೆ ಕರೆ ಬಂದು ಕೂಡಲೇ 22 ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು. ಬೆಂಕಿಯನ್ನು ಹತೋಟಿಗೆ ತರುವ ಹೊತ್ತಿಗೆ ರಾತ್ರಿ 9 ಗಂಟೆಯಾಗಿದ್ದು, ಇನ್ನೂ ಸ್ಥಳದಲ್ಲಿ ತಣ್ಣಗೆ ಮಾಡುವ ಕಾರ್ಯಾಚರಣೆ ಮುಂದುವರಿದಿದೆ.
ಬೆಂಕಿ ಅವಘಡಕ್ಕೂ ಮುನ್ನ ಕಾರ್ಖಾನೆಯಲ್ಲಿ ರಾಸಾಯನಿಕಗಳಿಂದ ಸ್ಫೋಟ ಸಂಭವಿಸಿ ಈ ದುರಂತ ಸಂಭವಿಸಿದೆ. ದುರ್ಘಟನೆ ನಡೆದ ಬಳಿಕ ಸ್ಥಳದಲ್ಲಿದ್ದ ಕೆಲವರು ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಈ ಕುರಿತು ತನಿಖೆ ನಡೆಸಲು ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.