ಬಳ್ಳಾರಿ,ಫೆ.16 : ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ಪ್ರಕರಣಗಳು ಹೆಚ್ಚುತ್ತಿದ್ದು, ಅದರಂತೆ ಅವುಗಳ ತಡೆಗೂ ಕಾಯ್ದೆ-ಕಾನೂನುಗಳಿವೆ. ಅಧಿಕಾರಿಗಳು ಮಕ್ಕಳ ಹಕ್ಕುಗಳು ಹಾಗೂ ಕಾಯ್ದೆಗಳನ್ನು ತಿಳಿದುಕೊಂಡು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ಅವರು ಹೇಳಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೆÇಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮಕ್ಕಳ ಹಕ್ಕುಗಳು ಮತ್ತು ವಿವಿಧ ಕಾಯ್ದೆಗಳ ಕುರಿತು ಭಾಗೀದಾರ ಇಲಾಖೆಗಳ ಜಿಲ್ಲಾ, ತಾಲ್ಲೂಕು, ಗ್ರಾಮ ಮಟ್ಟದ ಅಧಿಕಾರಿಗಳಿಗೆ ಶುಕ್ರವಾರದಂದು ಜಿಪಂನ ನಜೀರ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಹಕ್ಕುಗಳ ರಕ್ಷಣೆ, ಬಾಲ ನ್ಯಾಯ ಕಾಯ್ದೆಯ ಮೂಲ ಉದ್ದೇಶವಾಗಿದೆ. ಎಲ್ಲರೂ ತಮ್ಮ ಕಾರ್ಯವ್ಯಾಪ್ತಿ ಅರಿತುಕೊಂಡು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದಾಗ ಕಾಯ್ದೆಗಳ ಅನುಷ್ಠಾನ ಸಾಧ್ಯ ಎಂದರು.
ಮಕ್ಕಳ ಹಕ್ಕುಗಳ ರಕ್ಷಣೆ, ಬಾಲ ನ್ಯಾಯ ಕಾಯ್ದೆ ಸೇರಿದಂತೆ ಮಕ್ಕಳಿಗೆ ಸಂಬಂಧಿಸಿದ ಕಾಯ್ದೆಗಳ ಅನುಷ್ಠಾನಕ್ಕೆ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ, ಪೆÇಲೀಸ್ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಕಾಯ್ದೆಗಳ ಅನುಷ್ಠಾನಕ್ಕೆ ಎಲ್ಲ ಇಲಾಖೆಗಳ ಸಹಕಾರ ಬಹಳ ಅಗತ್ಯ ಎಂದು ತಿಳಿಸಿದರು.
ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯ ವಿವಾಹ ಪದ್ದತಿ, ಬಾಲ ಕಾರ್ಮಿಕ ಪದ್ಧ್ದತಿ ನಿರ್ಮೂಲನೆಯೂ ಪ್ರತಿಯೊಬ್ಬ ಅಧಿಕಾರಿಗಳ ಜವಾಬ್ದಾರಿಯಾಗಬೇಕು. ಇಂಥ ಕೃತ್ಯಗಳ ನಿಯಂತ್ರಣಕ್ಕೆ ವಿವಿಧ ಇಲಾಖೆಗಳ ಸಹಕಾರವೂ ಅಗತ್ಯವಾಗಿದೆ. ಇವುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಇಂಥ ಕಾರ್ಯಾಗಾರ ಅವಶ್ಯಕ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪ್ರಾಪ್ತೆಯರು ಗರ್ಭೀಣಿಯಾಗುತ್ತಿರುವುದು ವಿಷಾಧಕರ ಸಂಗತಿಯಾಗಿದೆ. ಬಾಲ ನ್ಯಾಯ ಕಾಯ್ದೆ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಅರಿವು ಮೂಡಿಸಬೇಕು ಎಂದು ಹೇಳಿದರು.
ಮಕ್ಕಳ ಹಕ್ಕುಗಳ ರಕ್ಷಣೆ, ಅವರ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸದಾ ಬದ್ಧವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಮಕ್ಕಳಿಗೆ ಗುಣಮಟ್ಟ ಶಿಕ್ಷಣ, ಸಧೃಡ ಆರೋಗ್ಯ, ಸಮಾಜದಲ್ಲಿ ಉತ್ತಮ ಅವಕಾಶಗಳನ್ನು ಕಲ್ಪಿಸುವುದು ಆದ್ಯ ಕರ್ತವ್ಯವಾಗಿದೆ.
ಮಕ್ಕಳ ಹಕ್ಕುಗಳು ಮತ್ತು ಅವುಗಳಿಗೆ ಚ್ಯುತಿ ಉಂಟಾದಾಗ ಬರುವ ಕಾಯ್ದೆಗಳ ಬಗ್ಗೆ ತಿಳಿದುಕೊಂಡಾಗ ಮಾತ್ರ ಅಧಿಕಾರಿಗಳು ತಮ್ಮ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್.ಕೆ.ಹೆಚ್ ಅವರು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಂತರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕೊಪ್ಪಳ ಯೂನಿಸೇಫ್ ಮಕ್ಕಳ ಸಂರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕರಾದ ಡಾ.ಕೆ.ರಾಘವೇಂದ್ರ ಭಟ್ ಅವರು, ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ ಕಾಯ್ದೆ-2015), ಪೆÇೀಕ್ಸೊ ಕಾಯ್ದೆ-2012, ಬಾಲ್ಯವಿವಾಹ ನಿಷೇಧ ಕಾಯ್ದೆ-2006, ಆರ್.ಟಿ.ಐ ಕಾಯ್ದೆ-2009ರ ಕಾಯ್ದೆಗಳ ಕುರಿತು ಕಾರ್ಯಾಗಾರದಲ್ಲಿ ವಿಶ್ಲೇಷಿಸಿದರು.
ಈ ಸಂದರ್ಭದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ವಿಜಯಲಕ್ಷ್ಮೀ ಮೈದೂರು, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಾಣಾಧಿಕಾರಿ ಹಾಗೂ ಪ್ರಭಾರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಮಕೃಷ್ಣ ನಾಯಕ.ಎಂ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.