ನವದೆಹಲಿ: ಅಕ್ಟೋಬರ್ ನಿಂದ ಆರಂಭವಾಗುವ 2024-25ರ ಋತುವಿನಲ್ಲಿ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಪಾವತಿಸಬೇಕಾದ ಕನಿಷ್ಠ ಬೆಲೆಯನ್ನು ಪ್ರತಿ ಕ್ವಿಂಟಾಲ್ ಗೆ 315 ರೂ.ಗಳಿಂದ 340 ರೂ.ಗೆ ಹೆಚ್ಚಿಸಲು ಸರಕಾರ ನಿರ್ಧರಿಸಿದೆ. 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಘೋಷಿಸಿದ ಕಬ್ಬಿಗೆ ಇದು ಅತ್ಯಧಿಕ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ಆಗಿದೆ. ಮೋದಿ ಸರ್ಕಾರ FRPಯನ್ನು ಒಂದೇ ಬಾರಿಗೆ ಕ್ವಿಂಟಾಲ್ಗೆ 25 ರೂ.ಗಳಷ್ಟು ಹೆಚ್ಚಿಸಿರುವುದು ಇದು ಎರಡನೇ ಬಾರಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಸಭೆಯಲ್ಲಿ FRP ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಬ್ಬನ್ನು ಮುಖ್ಯವಾಗಿ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ. 2024-25ನೇ ಸಾಲಿಗೆ ಕಬ್ಬಿನ ಎಫ್ಆರ್ ಪಿಯನ್ನು ಪ್ರತಿ ಕ್ವಿಂಟಾಲ್ಗೆ 340 ರೂ.ಗಳಂತೆ ಶೇ.10.25 ರಷ್ಟು ಸಕ್ಕರೆ ಚೇತರಿಕೆ ದರದಲ್ಲಿ ಸಿಸಿಇಎ ಅನುಮೋದಿಸಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಸುದ್ದಿಗಾರರಿಗೆ ತಿಳಿಸಿದರು.
ಇದು ಕಬ್ಬಿನ ಐತಿಹಾಸಿಕ ಬೆಲೆಯಾಗಿದ್ದು, 2023-24ರ ಪ್ರಸಕ್ತ ಋತುವಿನಲ್ಲಿ ಕಬ್ಬಿನ ಎಫ್ಆರ್ ಪಿಗಿಂತ ಶೇಕಡಾ 8ರಷ್ಟು ಹೆಚ್ಚಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಹೊಸ ಎಫ್ಆರ್ಪಿ ಕಬ್ಬಿನ ಎ2+ಎಫ್ಎಲ್ ವೆಚ್ಚಕ್ಕಿಂತ ಶೇಕಡಾ 107 ರಷ್ಟು ಹೆಚ್ಚಾಗಿದೆ. ಇದು ಕಬ್ಬು ಬೆಳೆಗಾರರ ಸಮೃದ್ಧಿಯನ್ನು ಖಚಿತಪಡಿಸುತ್ತದೆ ಎಂದು ಠಾಕೂರ್ ಹೇಳಿದರು. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಕಬ್ಬಿಗೆ ಬೆಲೆ ತೆರುತ್ತಿದೆ ಎಂದು ಸಚಿವರು ಪ್ರತಿಪಾದಿಸಿದರು.
ಪರಿಷ್ಕೃತ ಎಫ್ಆರ್ ಪಿ ಅಕ್ಟೋಬರ್ 1, 2024 ರಿಂದ ಜಾರಿಗೆ ಬರಲಿದೆ. ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸುಗಳ ಆಧಾರದ ಮೇಲೆ ಎಫ್ಆರ್ ಪಿಯನ್ನು ನಿರ್ಧರಿಸಲಾಗಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರ 5 ಕೋಟಿಗೂ ಹೆಚ್ಚು ಕಬ್ಬು ಬೆಳೆಗಾರರಿಗೆ (ಕುಟುಂಬ ಸದಸ್ಯರು ಸೇರಿದಂತೆ) ಮತ್ತು ಸಕ್ಕರೆ ಕ್ಷೇತ್ರದಲ್ಲಿ ತೊಡಗಿರುವ ಲಕ್ಷಾಂತರ ಇತರ ವ್ಯಕ್ತಿಗಳಿಗೆ ಪ್ರಯೋಜನವನ್ನು ನೀಡುತ್ತದೆ.