ಪಿಎಂ ಕಿಸಾನ್ ಯೋಜನೆಯಲ್ಲಿ ಇಲ್ಲಿಯವರೆಗೆ ಸರ್ಕಾರ 16 ಕಂತುಗಳಲ್ಲಿ ಹಣವನ್ನು ರೈತರ ಖಾತೆಗಳಿಗೆ ವರ್ಗಾಯಿಸಿದೆ. ಇಲ್ಲಿಯವರೆಗೆ ರೈತರಿಗೆ ನೀಡಲಾಗಿರುವ ಒಟ್ಟಾರೆ ಮೊತ್ತ 3 ಲಕ್ಷ ಕೋಟಿ ರೂಗೂ ಹೆಚ್ಚು. ಇಕೆವೈಸಿ ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ ಇಕೆವೈಸಿ ಮಾಡಿಸಿಯೂ ಹಣ ಬಂದಿಲ್ಲದೇ ಇದ್ದರೆ ದೂರು ಕೊಡಲು ಅವಕಾಶಗಳಿವೆ.
ಬೆಂಗಳೂರು, ಫೆಬ್ರುವರಿ 29: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi Yojana) ಪ್ರಧಾನಿ ನರೇಂದ್ರ ಮೋದಿ ನಿನ್ನೆ ಬುಧವಾರ 16ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. ಮಹಾರಾಷ್ಟ್ರದ ಯವತ್ಮಾಲ್ನಲ್ಲಿ ರಿಮೋಟ್ ಬಟನ್ ಒತ್ತುವುದರ ಮೂಲಕ ಅವರು (PM Narendra Modi) 21,000 ರೂಗೂ ಹೆಚ್ಚು ಹಣವನ್ನು 9 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಹೆಚ್ಚಿನ ಮಂದಿಗೆ ನಿನ್ನೆಯೇ 2,000 ರೂ ಹಣ ತಲುಪಿರಬಹುದು. ಕೆಲವರಿಗೆ ತುಸು ವಿಳಂಬವಾಗಬಹುದು. ಒಂದು ವೇಳೆ ನೀವು ಯೋಜನೆಯಲ್ಲಿ ನೊಂದಾಯಿಸಿದ್ದರೂ ಹಣ ಬರುತ್ತಿಲ್ಲ ಎಂದಲ್ಲಿ ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಇಕೆವೈಸಿ ಅಪ್ಡೇಟ್ ಆಗಿರದಿದ್ದರೆ, ಅಥವಾ ಕೆವೈಸಿ ದಾಖಲೆ ಸರಿಯಾಗಿ ಹೊಂದಾಣಿಕೆ ಆಗಿಲ್ಲದೇ ಇದ್ದರೆ ಹಣ ಬಂದಿಲ್ಲದೇ ಇರಬಹುದು.
ಒಂದು ವೇಳೆ ನೀವು ಯೋಜನೆಯ ಫಲಾನುಭವಿಯಾಗಿ ಇಕೆವೈಸಿ ಮಾಡಿದ್ದರೂ ಹಣ ಬಂದಿಲ್ಲದಿದ್ದರೆ ದೂರು ಸಲ್ಲಿಸಲು ಅವಕಾಶ ಇದೆ. ಹೆಲ್ಪ್ ಡೆಸ್ಕ್ ತೆರೆದಿರುತ್ತದೆ, ಸಹಾಯವಾಣಿ ನಂಬರ್ಗಳಿವೆ. ಪಿಎಂ ಕಿಸಾನ್ ಪೋರ್ಟಲ್ಗೆ ಹೋಗಿ (pmkisan.gov.in/) ನೇರವಾಗಿ ದೂರು ಸಲ್ಲಿಸುವ ಅವಕಾಶ ಇದೆ.
ದೂರು ಸಲ್ಲಿಸುವ ಕ್ರಮಗಳು
- ಇಮೇಲ್ ಐಡಿ: [email protected] ಮತ್ತು [email protected]
- ಪಿಎಂ ಕಿಸಾನ್ ಹೆಲ್ಪ್ಲೈನ್ ನಂಬರ್: 155261 / 011-24300606
- ಪಿಎಂ ಕಿಸಾನ್ ಟೋಲ್ ಫ್ರೀ ನಂಬರ್: 1800-115-526
- ಪೋರ್ಟಲ್ನಲ್ಲಿ ನೇರ ಲಿಂಕ್: pmkisan.gov.in/Grievance.aspx
ಇಲ್ಲಿ ಪೋರ್ಟಲ್ನಲ್ಲಿ ನೀವು ಮೇಲಿನ ದೂರು ಪುಟ ತೆರೆದರೆ, ಅದರಲ್ಲಿ ನಿಮ್ಮ ಆಧಾರ್ ನಂಬರ್ ಅಥವಾ ಅಕೌಂಟ್ ನಂಬರ್, ಅಥವಾ ಮೊಬೈಲ್ ನಂಬರ್ ಅನ್ನು ನಮೂದಿಸಿ, ‘ಗೆಟ್ ಡೀಟೇಲ್ಸ್’ ಕ್ಲಿಕ್ ಮಾಡಿ.
ಪಿಎಂ ಕಿಸಾನ್ ಹಣ ಬರದೇ ಇರುವುದಕ್ಕೆ ಸಂಭಾವ್ಯ ಕಾರಣಗಳೇನು?
- ಬ್ಯಾಂಕ್ ಖಾತೆ ಸ್ಥಗಿತಗೊಂಡಿರಬಹುದು
- ಬ್ಯಾಂಕ್ ಖಾತೆ ನಿಷ್ಕ್ರಿಯಗೊಂಡಿರಬಹುದು
- ಖಾತೆದಾರ ಮೃತಪಟ್ಟಿರಬಹುದು
- ಆಧಾರ್ ನಿಷ್ಕ್ರಿಯಗೊಂಡಿರಬಹುದು
- ಬ್ಯಾಂಕ್ ಖಾತೆ ತಪ್ಪಾಗಿ ನಮೂದಿಸಿರಬಹುದು
- ಬ್ಯಾಂಕ್ ಖಾತೆಯ ಐಎಫ್ಎಸ್ಸಿ ಕೋಡ್ ತಪ್ಪಾಗಿರಬಹುದು
ಇಕೆವೈಸಿ ಮಾಡುವುದು ಕಡ್ಡಾಯ
ನೀವು ಪಿಎಂ ಕಿಸಾನ್ ಯೋಜನೆಯಲ್ಲಿ ಇಕೆವೈಸಿ ಅಪ್ಡೇಟ್ ಮಾಡಿಲ್ಲದೇ ಇದ್ದರೆ 14, 15 ಮತ್ತು 16ನೇ ಕಂತಿನ ಹಣ ಸಿಕ್ಕಿರುವುದಿಲ್ಲ. ಸರ್ಕಾರ ಈ ಹಿಂದೆಯೇ ಸಾಕಷ್ಟು ಗಡುವು ಕೊಟ್ಟಿತ್ತು. ಪಿಎಂ ಕಿಸಾನ್ ವೆಬ್ಸೈಟ್ಗೆ ಹೋಗಿ ಸುಲಭವಾಗಿ ಇಕೆವೈಸಿ ಸಲ್ಲಿಸಬಹುದು. ರೈತ ಸಂಪರ್ಕ ಕೇಂದ್ರಕ್ಕೆ ಹೋಗಿಯೂ ಆಧಾರ್ ದಾಖಲೆ ಕೊಟ್ಟು ಕೆವೈಸಿ ಅಪ್ಡೇಟ್ ಮಾಡಿಸಬಹುದು.