ಬೆಂಗಳೂರು: ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಪರಿಸ್ಥಿತಿ ನಿಭಾಯಿಸಲು ಮತ್ತು ಜಾನುವಾರುಗಳಿಗೆ ಮೇವು ಅಭಾವ ತಪ್ಪಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳ ಮಾಸಿಕ ಸಭೆಯ ನಡುವೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಖಾಸಗಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಸರ್ಕಾರ ಟೆಂಡರ್ ಕರೆದಿದೆ.
ಖಾಸಗಿ ನೀರಿನ ಟ್ಯಾಂಕರ್ಗಳನ್ನು ಸಿದ್ದಪಡಿಸುವಂತೆ ತಾಲೂಕು ಮತ್ತು ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಟ್ಯಾಂಕರ್ ಮೂಲಕ 24 ಗಂಟೆಯೊಳಗೆ ನೀರು ಪೂರೈಸಬೇಕು. ಖಾಸಗಿ ಬೋರ್ವೆಲ್ನಿಂದಲೂ ನೀರು ಪಡೆಯುತ್ತೇವೆ ಎಂದರು.
ಡಿಸೆಂಬರ್ನಿಂದ ಈವರೆಗೆ ತಾಲೂಕು ಮಟ್ಟದ 600 ಸಭೆಗಳನ್ನು ನಡೆಸಲಾಗಿದೆ. ಫೆಬ್ರವರಿ ಒಂದೇ ತಿಂಗಳಲ್ಲಿ 154 ಟಾಸ್ಕ್ ಫೋರ್ಸ್ ಸಭೆ ನಡೆಸಲಾಗಿದೆ. ಬರ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಬರ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ರೂ. 725.92 ಕೋಟಿ ಹಾಗೂ ತಹಶೀಲ್ದಾರ್ ಖಾತೆಯಲ್ಲಿ ರೂ.135.40 ಕೋಟಿ ಸೇರಿದಂತೆ ಒಟ್ಟು ರೂ. 861.32 ಕೋಟಿ ಅನುದಾನವು ಬರ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು ಲಭ್ಯವಿದೆ ಎಂದು ಸಚಿವರು ಮಾಹಿತಿ ನೀಡಿದರು.