ಬಳ್ಳಾರಿ, ಮಾ.02: ಸಮಾಜದಲ್ಲಿ ದಮನಿತ ಹಾಗೂ ತುಳಿತಕ್ಕೆ ಒಳಗಾದ ಜನರ ಧ್ವನಿಯಾಗಲು ಪತ್ರಿಕೆಯನ್ನು ಅಸ್ತ್ರವಾಗಿ ಬಳಸಿದವರು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಾಯಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಅಂಬೇಡ್ಕರ್ ಅವರು ಬಡವ, ದುರ್ಬಲ,ಅಸ್ಪೃಶ್ಯ,ಹಿಂದುಳಿದ ಹಾಗೂ ಸಮಾಜದ ಕಟ್ಟಕಡೆಯ ಜನರನ್ನು ಜಾಗೃತಿ ಗೊಳಿಸಲು ತಮ್ಮ ಮಾತೃಭಾಷೆ ಮರಾಠಿಯಲ್ಲೇ ಮೂಕನಾಯಕ, ಬಹಿಷ್ಕೃತ ಭಾರತ, ಸಮತಾ,ಜನತಾ ಹಾಗೂ ಪ್ರಬುದ್ಧ ಭಾರತ ಪತ್ರಿಕೆಗಳನ್ನು ಆರಂಭಿಸಿದರು.
ಅಷ್ಟೇ ಅಲ್ಲದೆ ಬಹಿರಂಗ,ಸಾರ್ವಜನಿಕ ಸಭೆ,ಮುಷ್ಕರ, ಚಳವಳಿ ಹಾಗೂ ಹೋರಾಟದ ಮೂಲಕ ಜನರನ್ನು ಎಚ್ಚರಿಸಿದರು.
ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಎಲ್ಲಾ ಜನರಿಗೂ ಒಳಿತಾಗುವಂತೆ ಮೂಲಭೂತ ಹಕ್ಕು ಹಾಗೂ ಮೀಸಲಾತಿ ರೂಪದಲ್ಲಿ ಸಂವಿಧಾನದಲ್ಲಿ ಸೇರ್ಪಡೆಗೊಳಿಸಿ ದಮನಿತ ಜನರ ಆಶಾಕಿರಣವಾದರು.
ಆದ್ದರಿಂದ ಮನುಕುಲದ ಒಳತಿಗಾಗಿ ಶ್ರಮಿಸಿದ ಬುದ್ಧ, ಬಸವ,ಅಂಬೇಡ್ಕರ್ ಹಾಗೂ ಗಣಿತ ತಜ್ಞ ಶ್ರೀನಿವಾಸ ರಾಮಾನುಜಮಂ ಅವರ ಆದರ್ಶಗಳನ್ನು ಪಾಲಿಸೋಣ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಸಮ್ಮ ಉದ್ಘಾಟಿಸಿ ಮಾತನಾಡಿದ ಅವರು ಅಂಬೇಡ್ಕರ್ ಅವರು ನಮ್ಮೆಲ್ಲರಿಗೂ ಆದರ್ಶ. ಅವರ ಆಶಯಗಳನ್ನು ನಾವೆಲ್ಲ ಈಡೇರಿಸೋಣ ಎಂದು ಹೇಳಿದರು.
ಕಾಲೇಜು ವಿದ್ಯಾರ್ಥಿನಿ ಹೇಮಾವತಿ ಹಾಗೂ ಎಂಟನೇ ತರಗತಿ ವಿದ್ಯಾರ್ಥಿ ವಂಶಿ ಗೆ ಬಹುಮಾನ ವಿತರಿಸಲಾಯಿತು.
ಹೇಮಾವತಿ ಅಂಬೇಡ್ಕರ್ ಕುರಿತು ರಚಿಸಿದ ಸ್ವರಚಿತ ಕವನವನ್ನು ಪ್ರಾರ್ಥನೆ ರೂಪದಲ್ಲಿ ಹೇಳಿದರು.
ಶಿಕ್ಷಕರಾದ ಎಂ.ಮೋದಿನ್ ಸಾಬ್, ಸಮಾಜ ಶಿಕ್ಷಕಿ ಶಶಮ್ಮ, ನಲಿಕಲಿ ಶಿಕ್ಷಕ ರಾಮಾಂಜಿನೇಯ, ಅಂಗನವಾಡಿ ಕಾರ್ಯಕರ್ತೆಯರಾದ ಪದ್ಮಾವತಿ, ಶ್ರೀದೇವಿ, ನಿಂಗಮ್ಮ,ಆಶಾ ಕಾರ್ಯಕರ್ತೆ ಸುಶೀಲಾ, ವಿದ್ಯಾರ್ಥಿ ಪ್ರತಿನಿಧಿ ಮಹೇಶ, ವೈಶಾಲಿ, ಚೈತ್ರ ಮುಂತಾದವರು ಉಪಸ್ಥಿತರಿದ್ದರು.