ಗದಗ, ಮಾರ್ಚ್.04: ಸಾಲಬಾಧೆಯಿಂದ ಬೇಸತ್ತ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಸಾಲಬಾಧೆಯಿಂದ ಮನನೊಂದ ಮಗ ಹಾಗೂ ತಾಯಿ ಯಲವಿಗೆ ರೈಲು ನಿಲ್ದಾಣದ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ತಾಯಿ-ಮಗ ಸಾವಿನ ಸುದ್ದಿ ಕೇಳಿ ಮತ್ತೋರ್ವ ಮಹಿಳೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಜುನಾಥ ತೇಲಿ (26) ಸಾವಕ್ಕ ತೇಲಿ (40) ರೇಣವ್ವ (39) ಆತ್ಮಹತ್ಯೆಗೆ ಶರಣಾದವರು.
ಮೃತ ಗ್ರಾಮಸ್ಥರು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದ ತೇಲಿ ಕುಟುಂಬದವರು. ರೈಲು ಹಳಿಗೆ ಬಿದ್ದು ತಾಯಿ ಹಾಗೂ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಟ್ರ್ಯಾಕ್ಟರ್ ಸಾಲ ಕಟ್ಟುವ ವಿಷಯವಾಗಿ ಗಲಾಟೆ ಮಾಡಿಕೊಂಡಿದ್ದ ಮಂಜುನಾಥ ಆತ್ಮಹತ್ಯೆಗೆ ಮುಂದಾಗಿದ್ದ ಈ ವೇಳೆ ರಕ್ಷಣೆ ಮಾಡಲು ಹೋಗಿ ತಾಯಿ ಕೂಡ ಹಳಿ ಮೇಲೆ ಬಿದ್ದು ಬಲಿಯಾಗಿದ್ದಾರೆ. ಹಾವೇರಿ ಜಿಲ್ಲೆಯ ಯಲವಿಗೆ ರೈಲು ನಿಲ್ದಾಣದ ಬಳಿ ಘಟನೆ ನಡೆದಿದೆ. ಇನ್ನು ಮತ್ತೊಂದೆಡೆ ಮಗ ಮಂಜುನಾಥ ತೇಲಿ ಹಾಗೂ ತಾಯಿ ರೇಣವ್ವ ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದು ಸಾವಕ್ಕ ಎಂಬುವವರು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.