ಬಳ್ಳಾರಿ,ಮಾ.07 : ಬರುವ ಲೋಕಸಭಾ ಚುನಾವಣೆ ರಾಜ್ಯದ ಮತದಾನ ಪ್ರಮಾಣ ಹೆಚ್ಚಿಸಲು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಲ್ಲಾ ಮತದಾರರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕ್ರಮವಹಿಸಬೇಕು ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಎಂ.ಕುರ್ಮಾರಾವ್ ಅವರು ಎಲ್ಲಾ ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿಗಳಾದ ಪಂಚಾಯತ್ ಸಿಇಒ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಲೋಕಸಭೆ ಚುನಾವಣೆ ಸಂಬಂಧ ಮತದಾನ ಪ್ರಮಾಣ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಜಿಲ್ಲೆಯ ಸ್ವೀಪ್ ನೋಡೆಲ್ ಅಧಿಕಾರಿಗಳಾದ ಜಿಪಂ ಸಿಇಒ ಅಧಿಕಾರಿಗಳ ಜೊತೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿ ಮಾತನಾಡಿದರು.
ರಾಜ್ಯದಲ್ಲಿ ಮತದಾನ ಮೌಲ್ಯ ಕುರಿತು ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕು. ಮತದಾನ ಪ್ರಕ್ರಿಯೆಯಲ್ಲಿ ಅರ್ಹ ಮತದಾರರು ತಪ್ಪದೇ ಭಾಗವಹಿಸುವಂತೆ ಹಾಗೂ ಜಿಲ್ಲೆವಾರು ಮತದಾನ ಪ್ರಮಾಣ ಹೆಚ್ಚಾಗುವಂತೆ ಕ್ರಮವಹಿಸಬೇಕು ಎಂದರು.
ಸಾರ್ವಜನಿಕರಿಗೆ ಮಾದರಿ ಮತಗಟ್ಟೆ ಕೇಂದ್ರಗಳ ಬಗ್ಗೆ ಚಿತ್ರಣ ಬಿಂಬಿಸಲು ಪ್ರಾತ್ಯಕ್ಷಿಕೆ ತೋರಿಸಬೇಕು. ಇದಕ್ಕೆ ಕಾರ್ಯಯೋಜನೆ ರೂಪಿಸಿಕೊಳ್ಳಬೇಕು ಎಂದು ಸೂಚಿಸಿದರು.
ಆಯಾ ಜಿಲ್ಲಾ ನೋಡಲ್ ಅಧಿಕಾರಿಗಳು ಜಿಲ್ಲೆಯ ಎಲ್ಲಾ ಮತದಾರರ ಪಟ್ಟಿಯ ಮಾಹಿತಿ ಪಡೆದುಕೊಂಡು, ಈ ಹಿಂದೆ ಮತದಾನದಿಂದ ಹೊರಗುಳಿದ ಪ್ರತಿಯೊಬ್ಬ ಮತದಾರರು ತಮ್ಮ ಮತ ಚಲಾಯಿಸುವಂತೆ ದೂರವಾಣಿ ಕರೆ ಮೂಲಕ, ಮೊಬೈಲ್ ಸಂದೇಶ ರವಾನೆ ಮುಖಾಂತರ ಮನವೊಲಿಸಬೇಕು ಎಂದು ಹೇಳಿದರು.
ಮುಖ್ಯವಾಗಿ 18 ವರ್ಷ ಮೇಲ್ಪಟ್ಟ ಹೊಸದಾಗಿ ನೋಂದಾಯಿಸಿಕೊಂಡ ಯುವ ಜನತೆ ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ನಿಗಾವಹಿಸಬೇಕು. ಇನ್ನುಳಿದಂತೆ ತೃತೀಯ ಲಿಂಗಿಗಳು ಮತದಾನದಿಂದ ಹೊರಗುಳಿಯಬಾರದು ಎಂದರು.
ನಗರ ಭಾಗಗಳಲ್ಲಿ ಕಡೆ ಹೆಚ್ಚು ಗಮನಹರಿಸುವ ಮೂಲಕ ಮತದಾನ ಕುರಿತು ಅರಿವು ಮೂಡಿಸಿ, ಮತದಾನ ಹೆಚ್ಚಾಗುವಲ್ಲಿ ಕಾಳಜಿ ವಹಿಸಬೇಕು. ಹೊಸ ಮತಗಟ್ಟೆ ಕೇಂದ್ರಗಳಲ್ಲಿ ಹೆಚ್ಚು ಮತದಾನವಾಗುವಂತೆ ಗಮನಹರಿಸಬೇಕು ಎಂದು ನಿರ್ದೇಶನ ನೀಡಿದರು.
ಸಂವಾದದಲ್ಲಿ ಇನ್ನಿತರೆ ಚುನಾವಣಾ ಮಾರ್ಗಸೂಚಿಗಳ ಕುರಿತು ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ನೋಡೆಲ್ ಅಧಿಕಾರಿಯೂ ಆದ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎ.ಕೆ ಜಲಾಲಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
——-