ದಾವಣಗೆರೆ: ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬುಧವಾರ ಬಿಡುಗಡೆ ಮಾಡಿದ್ದು, ಹಲವು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ. ಅದರಂತೆ ದಾವಣಗೆರೆ ಹಾಲಿ ಸಂಸದ ಜಿಎಂ ಸಿದ್ದೇಶ್ವರ್ ಅವರ ಬದಲಿಗೆ ಅವರ ಪತ್ನಿ ಗಾಯತ್ರಿ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಲಾಗಿದೆ.
ಈ ಬಾರಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಅವರು ಸಹ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಅವರಿಗೆ ಟಿಕೆಟ್ ನಿರಾಕರಿಸಿ ಸಿದ್ದೇಶ್ವರ್ ಅವರ ಪತ್ನಿಗೆ ಟಿಕೆಟ್ ನೀಡಿದ್ದಕ್ಕೆ ಆಕ್ರೋಶಗೊಂಡ ಅವರ ಬೆಂಬಲಿಗನೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ.
ಇಂದು ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿರುವ ಎಸ್.ಎ.ರವೀಂದ್ರನಾಥ್ ನಿವಾಸದ ಬಳಿಯೇ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ.ಇನ್ನು ಸಿದ್ದರೇಶ್ವರ್ ಅವರ ಪತ್ನಿಗೆ ದಾವಣಗೆರೆ ಟಿಕೆಟ್ ನೀಡಿದ್ದಕ್ಕೆ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲ. ಸರ್ವೆಯಲ್ಲಿಯೂ ಕೂಡ ಸಂಸದ ಸಿದ್ದೇಶ್ವರ ಕುಟುಂಬದ ಹೆಸರಿಲ್ಲ. ಸರ್ವೆ ಸಂಪೂರ್ಣ ಸಂಸದ ಸಿದ್ದೇಶ್ವರ್ ವಿರುದ್ಧ ಬಂದಿದೆ. ಗೂಂಡಾಗಳನ್ನ ಇಟ್ಕೊಂಡು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.