ಬಳ್ಳಾರಿ: ಕಡು ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಸ್ಥಳೀಯವಾಗಿ ದೊರಕಿಸಿ ಹೆಚ್ಚಿನ ಚಿಕಿತ್ಸೆಗೆ ದೂರದೂರಿಗೆ ರೋಗಿಗಳನ್ನು ಕಳುಹಿಸುವುದನ್ನು ತಪ್ಪಿಸಲು ನಗರದ ಜಿಲ್ಲಾಸ್ಪತ್ರೆಯಲ್ಲಿ ಟೆಲಿಐಸಿಯು ಹಬ್ ಆರಂಭಿಸಲಾಗಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಹೇಳಿದರು.
ನಗರದ ಜಿಲ್ಲಾಸ್ಪತ್ರೆಯ ಡಿ.ಎನ್.ಬಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ
ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತು ಪರಿಚಯ ಮತ್ತು ಜಾಗೃತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ ಹೆರಿಗೆ ಪ್ರಕರಣಗಳು ಜಿಲ್ಲಾ ಆಸ್ಪತ್ರೆ ಮತ್ತು ವಿಮ್ಸ್ ಆಸ್ಪತ್ರೆಯಲ್ಲಿ ಹೆಚ್ಚು ಆಗುತ್ತಿರುವುದರಿಂದ, ಶಿಶು ಮತ್ತು ತಾಯಿ ಮರಣವನ್ನು ನಿಯಂತ್ರಿಸಲು ಇದರಿಂದ ಸಹಕಾರಿಯಾಗಲಿದೆ.
ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ, ತುರ್ತು ಸಂದರ್ಭಗಳಲ್ಲಿಯೂ ಜಿಲ್ಲಾ ಆರೋಗ್ಯ ಇಲಾಖೆಯು ಉತ್ತಮ ಸೇವೆ ನೀಡುತ್ತಿದೆ. ಲಸಿಕಾ ಕಾರ್ಯಕ್ರಮಗಳೂ ಅತ್ಯುತ್ತಮ ರೀತಿಯಲ್ಲಿ ಒದಗಿಸಲಾಗುತ್ತಿದ್ದು, ಮಾರಕ ರೋಗಗಳನ್ನು ತಡೆಗಟ್ಟಲಾಗುತ್ತಿದೆ ಎಂದು ಹೇಳಿದರು.
ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕೈಗೊಳ್ಳಲಾಗುವ ಕಾರ್ಯಕ್ರಮಗಳು, ಸೌಲಭ್ಯಗಳು ಮತ್ತು ಆರೋಗ್ಯ ಜಾಗೃತಿ ಸಂದೇಶಗಳ ಕುರಿತು ಸಾರ್ವಜನಿಕರಿಗೆ ತಲುಪಿಸಲು ಮಾಧ್ಯಮಗಳ ಸಹಕಾರ ಅಗತ್ಯವಾಗಿದೆ.
ಜಿಲ್ಲೆಯಲ್ಲಿ ಯಾವುದೇ ಆರೋಗ್ಯ ಸೇವೆಗಳು, ಸೌಲಭ್ಯಗಳು ಹಾಗೂ ಇತರೆ ಕುಂದು ಕೊರತೆಗಳು ಕಂಡು ಬಂದಲ್ಲಿ ಸಂಬಂಧಿಸಿದ ವಿಭಾಗದ ಅಧಿಕಾರಿಗಳಿಗೆ ಸಂಪರ್ಕಿಸಬಹುದು ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಸಲಹೆ ನೀಡಿದರು. ಡಿಎಚ್ ಓ ಡಾ.ವೈ.ರಮೇಶ್ ಬಾಬು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 27 ಆರೋಗ್ಯ ಕಾರ್ಯಕ್ರಮಗಳ ವಿಭಾಗಗಳಿವೆ. ಒಂದೊಂದು ಕಾರ್ಯಕ್ರಮ ಕುರಿತು ವಿಶೇಷ ವರದಿ ಮಾಡಲು ಅಗತ್ಯ ಮಾಹಿತಿ ಒದಗಿಸಲಾಗುವುದು. ವರದಿಯು ಸಕಾರಾತ್ಮಕವಾಗಿರಲಿ ಅಥವಾ ನಕಾರಾತ್ಮಕವಾಗಿರಲಿ ಅವುಗಳನ್ನು ಪರಿಗಣಿಸಿ, ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಕಾರ್ಯಕ್ರಮಗಳ ಕುರಿತು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಲಾಗುವುದು ಎಂದರು.
ಜಿಲ್ಲಾಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಆರೋಗ್ಯ ಸೇವೆಗಳು ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಮಾಧ್ಯಮ ಪ್ರತಿನಿಧಿಗಳು ಹೆಚ್ಚಿನ ರೀತಿಯಲ್ಲಿ ಪ್ರಚಾರ ನೀಡಬೇಕು ಎಂದು ತಿಳಿಸಿದರು. ಈ ವೇಳೆ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನೊಳಗೊಂಡ ಕಿರುಹೊತ್ತಿಗೆ ಮತ್ತು ವಿಶ್ವ ಗ್ಲಾಕೋಮಾ ಸಪ್ತಾಹ ಭಿತ್ತಿಪತ್ರ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ವೀರೇಂದ್ರ ಕುಮಾರ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಜಿಲ್ಲಾ ಆಸ್ಪತ್ರೆಯ ಶುಶುಷ್ರಣಾಧಿಕಾರಿ ಡಾ.ವಿಮಲಾಕ್ಷಿ ಸೇರಿದಂತೆ ಪತ್ರಕರ್ತರಾದ ವೆಂಕಟೇಶ ದೇಸಾಯಿ, ರವಿ ಕುಮಾರ್, ಹುಲುಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು