ಬಳ್ಳಾರಿ,ಮಾ.25 : ಮೆದುಳು ಜ್ವರ ಮಾರಕ ರೋಗವಾಗಿದ್ದು, ರೋಗವನ್ನು ಹರಡುವುದನ್ನು ನಿಯಂತ್ರಿಸಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವೈ ರಮೇಶ್ ಬಾಬು ತಿಳಿಸಿದರು.
ನಗರದ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬಿ.ಸಿ. ರಾಯ್ ಸಭಾಂಗಣದಲ್ಲಿ ಸೋಮವಾರದಂದು ಜಿಲ್ಲಾ ಆಸ್ಪತ್ರೆ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಘಟಕ ಇವರ ಸಂಯುಕ್ತಾಶ್ರಯದಡಿ ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಖಾಸಗಿ ಆಸ್ಪತ್ರೆಗಳ ತಜ್ಞ ವೈದ್ಯರುಗಳಿಗೆ ಏರ್ಪಡಿಸಿದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮೆದುಳು ಜ್ವರ ವೈರಾಣುಗಳನ್ನು ಹೊಂದಿದ ಹಂದಿ, ಬೆಳ್ಳಕ್ಕಿಯನ್ನು ಕಚ್ಚಿದ ಕ್ಯೂಲೆಕ್ಸ್ ಜಾತಿಯ ಸೊಳ್ಳೆಗಳು ಮನುಷ್ಯರಿಗೆ ಕಚ್ಚುವುದರಿಂದ ಮೆದುಳು ಜ್ವರ ಹರಡುತ್ತದೆ. ಈ ರೋಗವನ್ನು ತಡೆಗಟ್ಟಲು ಎಲ್ಲರೂ ಕೈಜೊಡಿಸಬೇಕಿದೆ. ಎರಡು ದಶಕಗಳ ಹಿಂದೆ ಜಿಲ್ಲೆಯು ಅತಿ ಹೆಚ್ಚು ಮೆದುಳು ಜ್ವರ ಪ್ರಕರಣಗಳು ವರದಿಯಾಗುತ್ತಿದ್ದವು. 2007 ರಲ್ಲಿ 15 ವರ್ಷದೊಳಗಿನ ಮಕ್ಕಳಿಗೆ ಮೆದುಳು ಜ್ವರ ನಿರೋಧಕ ಜೆಇ ಲಸಿಕೆಯನ್ನು ಅಭಿಯಾನದ ರೀತಿಯಲ್ಲಿ ನೀಡಿದ ನಂತರ ಪ್ರಸ್ತುತ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ. ಆದರೂ ಸಹ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದ್ದು, ಮಕ್ಕಳಲ್ಲಿ ವಿಪರೀತ ಜ್ವರ, ತಲೆನೋವು, ಕತ್ತಿನ ಬಿಗಿತ, ತಲೆ ಸುತ್ತುವಿಕೆ, ಮೈನಡುಕ ಮತ್ತು ಎಚ್ಚರ ತಪ್ಪುವುದು ಇಂತಹ ರೋಗ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರ ಬಳಿ ತಪಾಸಣೆ ಮಾಡಿಸಬೇಕು ಎಂದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳು ಹೆಚ್ಚಾಗಿ ಈ ರೋಗಕ್ಕೆ ತುತ್ತಾಗುತ್ತಿದ್ದು, ಕೆಲವರಿಗೆ ನರ ದೌರ್ಬಲ್ಯ ಮತ್ತು ಬುದ್ದಿ ಮಾಂದ್ಯತೆ ಉಂಟಾಗುತ್ತದೆ. ಪಾಲಕರು ತಮ್ಮ ಮಕ್ಕಳಿಗೆ 2 ಬಾರಿ ಅಂದರೆ 9ನೇ ಮತ್ತು 18ನೇ ತಿಂಗಳ ವಯಸ್ಸಿನಲ್ಲಿ ತಪ್ಪದೆ ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು.
ಮುಂಜಾಗ್ರತಾ ಕ್ರಮಗಳಾಗಿ ಹಂದಿಗಳನ್ನು ಜನರ ವಾಸ ಸ್ಥಳದಿಂದ ಮೂರು ಕಿಲೋ ಮೀಟರ್ ದೂರಕ್ಕೆ ಸ್ಥಳಾಂತರಿಸಬೇಕು. ರೋಗ ಕಾಣಿಸಿಕೊಂಡ ಸ್ಥಳಗಳಲ್ಲಿ ಹೊರಾಂಗಣ ಕೀಟನಾಶಕ ಧೂಮೀಕರಣ ಮಾಡುವುದು. ಹಂದಿ ಗೂಡುಗಳಿಗೆ ಕೀಟನಾಶಕ ಸಿಂಪಡಣೆ ಮಾಡುವುದು ಮತ್ತು ಸೊಳ್ಳೆ ನಿರೋಧಕ ಜಾಲರಿ ಹಾಕುವುದು. ತಪ್ಪದೇ ಸೊಳ್ಳೆ ಪರದೆ ಮತ್ತು ಸೊಳ್ಳೆ ನಿರೋಧಕಗಳನ್ನು ಉಪಯೋಗಿಸುವುದು. ಸಂಜೆ ವೇಳೆ ಮೈತುಂಬಾ ಬಟ್ಟೆ (ವಿಶೇಷವಾಗಿ ಮಕ್ಕಳು) ಧರಿಸುವುದು. ನೀರು ನಿಂತ ಸ್ಥಳಗಳಲ್ಲಿ ಲಾರ್ವಹಾರಿ ಮೀನು ಬಿಡಲು ಇಲಾಖೆಯಿಂದ ಪಡೆಯಬಹುದು. ರೈತರು ತಮ್ಮ ಹೊಲ ಗದ್ದೆಗಳಿಗೆ ಬೇವಿನ ಮಿಶ್ರಣದ ಗೊಬ್ಬರವನ್ನು ಉಪಯೋಗಿಸಲು ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ವಿಮ್ಸ್ನ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ವಿಶ್ವನಾಥ.ಬಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಹೆಚ್ಐವಿ, ಟಿಬಿ, ಮಲೇರಿಯಾ ನಿರ್ಮೂಲನಾ ಕಾರ್ಯಕ್ರಮಗಳ ರಾಷ್ಟ್ರೀಯ ಸಲಹಾ ಸಮಿತಿಯ ಸದಸ್ಯ ಡಾ.ಕೆ.ರವಿಕುಮಾರ್, ವಿಮ್ಸ್ನ ಮಕ್ಕಳ ತಜ್ಞ ಡಾ.ದುರ್ಗಪ್ಪ, ಡಾ.ಕೃಷ್ಣ, ವಿಮ್ಸ್ನ ವಿಜ್ಞಾನಿ ಮೈಕ್ರೋಬಯಾಲಜಿ ವಿಭಾಗದ ಡಾ.ಭಾವನ, ಡಾ.ವಿಶ್ವನಾಥ್.ಹೆಚ್, ಡಾ.ಗುರುನಾಥ್.ಬಿ ಚೌವ್ಹಾಣ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ಜಿಲ್ಲಾ ಕೀಟಶಾಸ್ತ್ರಜ್ಞ ನಂದಾ ಕಡಿ, ಎನ್ವಿಬಿಡಿಸಿಪಿ ಸಲಹೆಗಾರ ಪ್ರತಾಪ್ ಸೇರಿದಂತೆ ತಜ್ಞ ವೈದ್ಯರು ಉಪಸ್ಥಿತರಿದ್ದರು.