ಬೆಂಗಳೂರು: ಏಪ್ರಿಲ್ 26ರಂದು ಮೊದಲ ಹಂತದಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು ಅದರಂತೆ ಇಂದು ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು ನಾಮಪತ್ರ ಸಲ್ಲಿಸಿದ್ದು ತಮ್ಮ ಆಸ್ತಿ ಮೌಲ್ಯವನ್ನು ಘೋಷಿಸಿದ್ದಾರೆ.
598 ಕೋಟಿ ರೂಪಾಯಿ ಒಡೆಯರಾಗಿರುವ ಡಿಕೆ ಸುರೇಶ್ ಅವರ ಆಸ್ತಿಯಲ್ಲಿ ಕಳೆದ 5 ವರ್ಷದಲ್ಲಿ 259.19 ಕೋಟಿ ರೂಪಾಯಿಯಷ್ಟು ಆಸ್ತಿ ಮೌಲ್ಯವು ಹೆಚ್ಚಳವಾಗಿದೆ. ಅಲ್ಲದೆ ಒಟ್ಟು 207 ಕೋಟಿ ರೂಪಾಯಿ ಸಾಲವಿದೆ. ಉಪಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಡಿ ಕೆ ಶಿವಕುಮಾರ್ ಅವರ ಕಿರಿಯ ಸಹೋದರ ಸುರೇಶ್ ಅವರು 2019ರ ಸಾರ್ವತ್ರಿಕ ಚುನಾವಣೆಗೆ ಮುನ್ನ 339 ಕೋಟಿ ರೂಪಾಯಿ ಆಸ್ತಿಯನ್ನು ಘೋಷಿಸಿದ್ದರು.
ಬೆಂಗಳೂರು ಗ್ರಾಮಾಂತರದಿಂದ ಪುನರಾಯ್ಕೆ ಬಯಸಿರುವ ಮೂರು ಬಾರಿ ಸಂಸದರಾಗಿರುವ ಅವರು ಸಲ್ಲಿಸಿದ ನಾಮಪತ್ರದ ಜತೆಗೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ ಬ್ಯಾಂಕ್ಗಳಲ್ಲಿ 16.61 ಕೋಟಿ ರೂಪಾಯಿ ಠೇವಣಿ ಹೊಂದಿದ್ದಾರೆ. 57 ವರ್ಷದ ಸಂಸದ ಸುರೇಶ್ 32.76 ಕೋಟಿ ಮೌಲ್ಯದ 21 ಸ್ಥಳಗಳಲ್ಲಿ ಕೃಷಿ ಭೂಮಿ, 210.47 ಕೋಟಿ ಮೌಲ್ಯದ 27 ಸ್ಥಳಗಳಲ್ಲಿ ಕೃಷಿಯೇತರ ಭೂಮಿ, 211.91 ಕೋಟಿ ಮೌಲ್ಯದ ಒಂಬತ್ತು ವಾಣಿಜ್ಯ ಕಟ್ಟಡಗಳು ಮತ್ತು 27.13 ಕೋಟಿ ಮೌಲ್ಯದ ಮೂರು ವಸತಿ ಕಟ್ಟಡಗಳನ್ನು ಹೊಂದಿದ್ದಾರೆ. ಇನ್ನು ಡಿ.ಕೆ. ಸುರೇಶ್ ಸ್ವಂತ ಕಾರು ಹೊಂದಿಲ್ಲ. ಮನೆಯಲ್ಲಿ 70 ಲಕ್ಷ ರೂಪಾಯಿ ಮೌಲ್ಯದ ಪೀಠೋಪಕರಣವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.