ಬಳ್ಳಾರಿ,ಮಾ.29 : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವ ಚುನಾವಣೆಗಳಲ್ಲಿ ಮಾಧ್ಯಮಗಳ ಭಾಗವಹಿಸುವಿಕೆ ಬಹುಮುಖ್ಯ ಪಾತ್ರವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದರು.
ಅವರು, ಇಂದು ಜಿಲ್ಲಾ ಪಂಚಾಯತ್ನ ನಜೀರ್ಸಾಬ್ (ಹಳೆಯ) ಸಭಾಂಗಣದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಸಮಿತಿಯ ಕಾರ್ಯ ವಿಧಾನಗಳು (ಎಂಸಿಎಂಸಿ) ಹಾಗೂ ಕಾಸಿಗಾಗಿ ಸುದ್ದಿ (ಪೇಯ್ಡ್ ನ್ಯೂಸ್) ಕುರಿತಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಈಗಾಗಲೇ ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಘೋಷಣೆಯಾಗಿದ್ದು, ಜಿಲ್ಲೆಯಲ್ಲಿ ಮೇ 7 ರಂದು ಮತದಾನ ನಡೆಯಲಿದೆ. ಚುನಾವಣೆ ಸಂದರ್ಭದಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದ್ದು, ಮಾಧ್ಯಮಗಳು ಮತದಾರರಿಗೆ ಚುನಾವಣೆಯ ಕುರಿತು ಉಪಯುಕ್ತ ಮಾಹಿತಿ ನೀಡುವುದರ ಜೊತೆಗೆ ಮತದಾನದ ಪ್ರಾಮುಖ್ಯತೆಯನ್ನು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಚುನಾವಣೆಯ ಸಂದರ್ಭದಲ್ಲಿ ಮಾಧ್ಯಮಗಳು ವಸ್ತುನಿಷ್ಠ ಸುದ್ದಿಗಳಿಗೆ ಆದ್ಯತೆ ನೀಡಬೇಕು. ಟಿವಿ, ಕೇಬಲ್, ಪತ್ರಿಕೆಗಳಲ್ಲಿ ಭಿತ್ತರಗೊಳ್ಳುವ ರಾಜಕೀಯ ಜಾಹೀರಾತುಗಳಿಗೆ ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಸಮಿತಿ (ಎಂಸಿಎಂಸಿ) ಯಿಂದ ಪೂರ್ವಾನುಮತಿ ಕಡ್ಡಾಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಳ್ಳುವ ರಾಜಕೀಯ ಪಕ್ಷ, ವ್ಯಕ್ತಿಗಳ ಜಾಹೀರಾತುಗಳ ಮೇಲೂ ಎಂಸಿಎಂಸಿ ಸಮಿತಿಯು ನಿಗಾವಹಿಸಿದ್ದು, ಇವುಗಳಿಗೆ ಸಹ ಅನುಮತಿ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮಾಧ್ಯಮವನ್ನು ನಾಲ್ಕನೇ ಅಂಗವೆಂದು ಪರಿಗಣಿಸಲಾಗುತ್ತದೆ. ಚುನಾವಣೆಯನ್ನು ವಿಶ್ವಾಸಾರ್ಹತೆ ಹಾಗೂ ಪಾರದರ್ಶಕತೆಯ ಪರಿಮಿತಿಯಲ್ಲಿ ನಡೆಸುವಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ (ಎಂಸಿಸಿ) ಸಹ ಮುಖ್ಯ ಪಾತ್ರವಹಿಸುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಶೇಕಡವಾರು ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿಯಿಂದ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಸಂಬಂಧ ಸ್ವೀಪ್ ಚಟುವಟಿಕೆ ಕಾರ್ಯಕ್ರಮಗಳಿಗೆ ಹೆಚ್ಚು ಪ್ರಚಾರ ನೀಡಬೇಕು ಅವರು ಕೋರಿದರು.
ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಅವರು ಮಾತನಾಡಿ, ಚುನಾವಣೆ ಮಾದರಿ ನೀತಿ ಸಂಹಿತೆ ಸಂದರ್ಭದಲ್ಲಿ ಮುದ್ರಣ ಮಾಧ್ಯಮಗಳಲ್ಲಿ ರಾಜಕೀಯ ಜಾಹೀರಾತು ಪ್ರಕಟಗೊಂಡಿದ್ದಲ್ಲಿ ಅದು ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯ ಅನುಮತಿ ಇದೆಯೇ ಎಂಬುದನ್ನು ವಿಚಾರಣೆ ನಡೆಸಲಾಗುತ್ತದೆ. ಇಲ್ಲದಿದ್ದರೆ, ಆ ಮಾಧ್ಯಮದ ಮೇಲೆ ಐಪಿಸಿ ಸೆಕ್ಷನ್ 171ಹೆಚ್ ಉಲ್ಲಂಘನೆಯಾಗಿದೆ ಎಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ತುಕಾರಾಂ ರಾವ್ ಬಿ.ವಿ ಅವರು ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಸಮಿತಿಯ ಕಾರ್ಯ ವಿಧಾನಗಳು (ಎಂಸಿಎಂಸಿ) ಹಾಗೂ ಕಾಸಿಗಾಗಿ ಸುದ್ದಿ (ಪೇಯ್ಡ್ ನ್ಯೂಸ್) ಕುರಿತಾಗಿ ಕಾರ್ಯಗಾರದಲ್ಲಿ ವಿಶ್ಲೇಷಿಸಿ ಮಾತನಾಡಿ, ಮಾಧ್ಯಮ ಪ್ರಮಾಣೀಕರಣ ಮೇಲುಸ್ತುವಾರಿ ಸಮಿತಿಯಲ್ಲಿ (ಎಂಸಿಎಂಸಿ) ಟಿವಿ, ಚಾನೆಲ್, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತನ್ನು ಪ್ರಮಾಣಿಸಿ ಪ್ರಸಾರಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಹೇಳಿದರು.
ಕಾಸಿಗಾಗಿ ಸುದ್ದಿ (Paid News) ಮೇಲೂ ಎಂಸಿಎಂಸಿ ಸಮಿತಿಯು ನಿಗಾವಹಿಸಿದ್ದು, ಇವು ವರದಿಯಾದರೆ ಜಿಲ್ಲಾ ಚುನಾವಣಾಧಿಕಾರಿಗಳು ಸಂಬಂಧಿಸಿದ ಅಭ್ಯರ್ಥಿಗಳಿಗೆ ನೋಟೀಸ್ ಜಾರಿ ಮಾಡುತ್ತಾರೆ ಎಂದು ತಿಳಿಸಿದರು.
ಚುನಾವಣೆಗೆ ಮುದ್ರಣಗೊಳ್ಳುವ ಕರಪತ್ರ, ಕಾಸಿಗಾಗಿ ಸುದ್ದಿ, ಸುಳ್ಳುಸುದ್ದಿ, ಜಾತಿ ಕೋಮುವಾದ ಪ್ರಚೋದಿಸುವ ಇತ್ಯಾದಿ ಸುದ್ದಿಗಳ ಮೇಲೆ ಎಂಸಿಎಂಸಿ ಸಮಿತಿಯು ಹದ್ದಿನ ಕಣ್ಣಿಟ್ಟಿದೆ. ಇದನ್ನು ಹಬ್ಬಿಸುವುದು ಕೂಡ ಕಾನೂನು ಬಾಹಿರ ಎಂದು ಪರಿಗಣಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಇತರರು ಉಪಸ್ಥಿತರಿದ್ದರು.