ಮೈಸೂರು: ಮೈಸೂರು-ಕೊಡಗು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರ ಗೆಲ್ಲಲು ಪಣ ತೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಾವು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಬೇಕು ಎಂದರೆ ಈ ಚುನಾವಣೆಯಲ್ಲಿ 60 ಸಾವಿರ ಲೀಡ್ ಕೊಡಬೇಕು ಎಂದು ತಾವು ಪ್ರತಿನಿಧಿಸುತ್ತಿರುವ ವರುಣಾ ಕ್ಷೇತ್ರದ ಮತದಾರರಿಗೆ ಕೇಳಿಕೊಂಡಿದ್ದಾರೆ.
ಇಂದು ಬಿಳಿಗೆರೆಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ನಾನು ಸಿಎಂ ಸ್ಥಾನದಲ್ಲಿ ಇರಬೇಕೋ ಬೇಡವೋ? ನಾನು ಸಿಎಂ ಸ್ಥಾನದಲ್ಲಿರಬೇಕು ಅಂದರೇ ವರುಣಾ ಕ್ಷೇತ್ರದಲ್ಲಿ 60 ಸಾವಿರ ಲೀಡ್ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ವರುಣಾ ನನ್ನ ಪಾಲಿಗೆ ಅದೃಷ್ಟದ ಕ್ಷೇತ್ರ. ನಿಮ್ಮಿಂದ ಎರಡು ಬಾರಿ ಮುಖ್ಯಮಂತ್ರಿಯಾದೆ. ವರುಣಾ ಕ್ಷೇತ್ರದಲ್ಲಿ 60 ಸಾವಿರ ಲೀಡ್ ಕೊಡಿ. ನನಗಿಂತ ಹೆಚ್ಚು ಲೀಡ್ ಕೊಟ್ಟು ಸುನಿಲ್ ಬೋಸ್ ಗೆಲ್ಲಿಸಿ. ಆಗ ನನ್ನನ್ನು ಯಾರೂ ಮುಟ್ಟಲ್ಲ ಎಂದು ಹೇಳಿದರು.
ನಮ್ಮ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಂದಾಗಿ ರಾಜ್ಯದಲ್ಲಿ ಹೆಣ್ಣುಮಕ್ಕಳ ಆರ್ಥಿಕ ಸಾಮರ್ಥ್ಯ ಹೆಚ್ಚಿದೆ. ದುಡಿಯುವ ಅವಕಾಶವೂ ಹೆಚ್ಚಿದೆ. ಪುರುಷರ ಜೇಬಿಗೆ ಹಣ ಉಳಿತಾಯವಾಗಿದೆ. ಜನಸಾಮಾನ್ಯರ ಜೇಬಿಗೆ ಹಣ ಹಾಕಿ ನಮ್ಮ ಜನರ ಕೊಳ್ಳುವ ಶಕ್ತಿ ಹೆಚ್ಚಿಸಿದ್ದೇವೆ. ಇದನ್ನು ವಿರೋಧಿಸುವ ಬಿಜೆಪಿಯ ಕಾರ್ಯಕರ್ತರೂ, ಬೆಂಬಲಿಗರೂ ನಮ್ಮ ಗ್ಯಾರಂಟಿ ಯೋಜನೆಗಳ ಫಾಲಾನುಭವಿಗಳಾಗಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯ ಅಖಾಡವಾಗಿ ಮಾರ್ಪಟ್ಟಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಹೊಸಬರು ಕಣಕ್ಕಿಳಿದಿದ್ದಾರೆ. ಮೈಸೂರು-ಕೊಡಗು ಕ್ಷೇತ್ರದಲ್ಲಿ ಸತತ ಎರಡು ಬಾರಿ ಗೆಲುವು ಸಾಧಿಸಿದ್ದ ಸಂಸದ ಪ್ರತಾಪ್ ಸಿಂಹ ಬದಲು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
ಮೈಸೂರು-ಕೊಡಗು ಕ್ಷೇತ್ರದ ಜೊತೆಗೆ ಚಾಮರಾಜನಗರ ಎಸ್ ಸಿ ಮೀಸಲು ಕ್ಷೇತ್ರ ಕೂಡ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಎಚ್ ಸಿ ಮಹದೇವಪ್ಪನವರಿಗೆ ಪ್ರತಿಷ್ಠೆಯ ಅಖಾಡವಾಗಿ ಪರಿಣಮಿಸಿದೆ.