ಬಳ್ಳಾರಿ,ಏ.03 :
ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಮೇ 7 ರಂದು ನಡೆಯುವ ಮತದಾನ ದಿನದಂದು ಎಲ್ಲಾ ಅರ್ಹ ಮತದಾರರು ತಪ್ಪದೇ ಮತದಾನ ಮಾಡಬೇಕು ಎಂದು ಬಳ್ಳಾರಿ ತಾಲ್ಲೂಕು ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ತಾಪಂ ಇಒ ಮಡಗಿನ ಬಸಪ್ಪ ಅವರು ಹೇಳಿದರು.
ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಮತ್ತು ಬಳ್ಳಾರಿ ತಾಲ್ಲೂಕು ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ 93-ಬಳ್ಳಾರಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮತದಾನವು ಅಮೂಲ್ಯವಾಗಿದ್ದು, ಎಲ್ಲಾ ಪ್ರಜೆಗಳ ಮೂಲಭೂತ ಕರ್ತವ್ಯವೂ ಕೂಡ. ನಾಳಿನ ಒಳಿತಿಗಾಗಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು.
ಮತದಾರರು ಯಾವುದೇ ರೀತಿಯ ಒತ್ತಡ ಹಾಗೂ ಆಮಿಷಕ್ಕೆ ಒಳಗಾಗದೆ ನಿರ್ಭಯವಾಗಿ ತಮ್ಮ ನೆಚ್ಚಿನ ಅಭ್ಯರ್ಥಿಗೆ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿಸಲಾಯಿತು.
ಮತದಾನ ಜಾಗೃತಿ ಜಾಥಾವು ಬೆಳಗಲ್ಕ್ರಾಸ್ ವೃತ್ತದಿಂದ ಆರಂಭವಾಗಿ ಕೌಲ್ಬಜಾರ್ ಮುಖ್ಯ ರಸ್ತೆ ಮೂಲಕ ಫಸ್ಟ್ ಗೇಟ್ವರೆಗೆ ತಲುಪಿತು. ಜಾಥಾದಲ್ಲಿ ಸಹಾಯವಾಣಿ ಸಂಖ್ಯೆ 1950, ಸಿ-ವಿಜಿಲ್ ಆಪ್ ಹಾಗೂ ಇತರೆ ಮಾಹಿತಿಗಳನ್ನೊಳಗೊಂಡ ಜಾಗೃತಿ ಫಲಕಗಳ ಮೂಲಕ ರಸ್ತೆಯುದ್ದಕ್ಕೂ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ವಲಯ 3ರ ಆಯುಕ್ತರು ಹಾಗೂ ಪಾಲಿಕೆ ಸಿಬ್ಬಂದಿಗಳು, ಬೂತ್ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಯವರು, ಇತರರು ಹಾಜರಿದ್ದರು.