ಬಳ್ಳಾರಿ,ಏ.03 : ಮತದಾನವು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದ್ದು, ಸದೃಢ ಪ್ರಜಾಪ್ರಭುತ್ವದ ಚೌಕಟ್ಟನ್ನು ನಿರ್ಮಾಣ ಮಾಡುತ್ತದೆ ಎಂದು ಸರಳಾದೇವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪೆÇ್ರ.ಹೊನ್ನೂರಲಿ ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಭಾರತ ಸರ್ಕಾರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಹಾಗೂ ಬೆಂಗಳೂರು ಪ್ರಾದೇಶಿಕ ನಿರ್ದೇಶಕರು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಶೌರ್ಯ ದಿನದ ಅಂಗವಾಗಿ ಜಂಟಿಯಾಗಿ ಬುಧವಾರ ಆಯೋಜಿಸಿದ್ದ ‘ಸ್ವಚ್ಛತಾ ಅಭಿಯಾನ ಮತ್ತು ಮತದಾನ ಜಾಗೃತಿ ಚಾಲನೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮತದಾನಕ್ಕೆ ಸಂವಿಧಾನದಲ್ಲಿ ವಿಶೇಷವಾದ ಅರ್ಥವಿದೆ. ಪ್ರಸ್ತುತದಲ್ಲಿ ಅನಕ್ಷರಸ್ಥರು, ಬಡವರು, ಸಮಾಜದ ಕೆಳವರ್ಗದವರು ಮತದಾನ ಮಾಡಲು ಮುಂದಾಗುವರು. ಅಕ್ಷರಸ್ಥರು, ಬುದ್ದಿಜೀವಿಗಳು ಮತದಾನಕ್ಕೆ ಮುಂದಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದಲ್ಲಿ ಸರಿಯಾದ ವ್ಯಕ್ತಿ ಚುನಾಯಿತಗೊಂಡರೆ ಉತ್ತಮ ಸರ್ಕಾರ ಆಯ್ಕೆಯಾಗುತ್ತದೆ. ಇದರಿಂದ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ. ಒಳ್ಳೆ ಸರ್ಕಾರ ಆಯ್ಕೆ ಮಾಡಲು ನಾವೆಲ್ಲರೂ ಮತದಾನಕ್ಕೆ ಮುಂದಾಗೋಣ ಎಂದು ಕರೆ ನೀಡಿದರು.
ವಿಶ್ವವಿದ್ಯಾಲಯದ ಕುಲಸಚಿವರಾದ ಎಸ್.ಎನ್ ರುದ್ರೇಶ ಮಾತನಾಡಿ, ಭಾರತವು ಹಲವಾರು ವೈವಿಧ್ಯತೆಯಿಂದ ಕೂಡಿದ ರಾಷ್ಟ್ರವಾಗಿದೆ. ಸೈದ್ಧಾಂತಿಕ ಹಿನ್ನೆಲೆಯಲ್ಲಿ ಮತದಾನ ಮಾಡುವುದು ವಿರಳವಾಗಿದೆ. ಜನರಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ.ಕೆ.ಎಂ.ಮೇತ್ರಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ದಾನ ಎನ್ನುವುದು ಪವಿತ್ರವಾದದ್ದು, ಆದರೆ ಇಂದು ಅದು ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಜನಪ್ರತಿನಿಧಿಗಳನ್ನು ನಿಯಂತ್ರಿಸಲು ಮತ್ತು ತಮ್ಮದೇ ಸರ್ಕಾರವನ್ನು ಆಯ್ಕೆಗೊಳಿಸಲು ಮತದಾನವು ಪ್ರಮುಖವಾಗಿದೆ. ನಿರ್ಭೀತಿಯಿಂದ ಯಾವುದೇ ಆಮಿಷಕ್ಕೆ ಒಳಗಾಗದೆ ಮತದಾನ ಮಾಡಿದಲ್ಲಿ ಪ್ರಜಾಪ್ರಭುತ್ವಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಮತದಾನವನ್ನು ಪ್ರಜ್ಞಾಪೂರ್ವಕವಾಗಿ ಚಲಾಯಿಸೋಣ ಎಂದರು.
ಕಾರ್ಯಕ್ರಮದ ಸಂಯೋಜಕರಾದ ಡಾ. ಕುಮಾರ ಅತಿಥಿಗಳನ್ನು ಸ್ವಾಗತಿಸಿದರು. ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಸಂಯೋಜಕರಾದ ಡಾ ಶಶಿಧರ ಕೆÀಲ್ಲೂರು ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.