ಬಳ್ಳಾರಿಯ ಮನೆಯೊಂದರಲ್ಲಿದ್ದ 5 ಕೋಟಿ ರೂ. ನಗದು, ಬೆಳ್ಳಿ ಬಂಗಾರ ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿ ಮೇರೆಗೆ ಬಳ್ಳಾರಿ ಡಿವೈಎಸ್ಪಿ ಹಾಗೂ ಬ್ರೂಸ್ ಪೇಟೆ ಸಿಪಿಐ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ಬಳ್ಳಾರಿಯ ಕಂಬಳಿ ಬಜಾರ್ ನಲ್ಲಿರುವ ನರೇಶ್ ಗೋಲ್ಡ್ ಶಾಪ್ ಅವರ ಮನೆ ಮೇಲೆ ದಾಳಿ ಮಾಡಿದಾಗ ಈ ಹಣ ಪತ್ತೆಯಾಗಿದೆ. ಆಗ ಈ ವಿಚಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಲಾಗಿದ್ದು, ಸ್ವತಃ ಎಸ್ಪಿ ರಂಜಿತ್ ಕುಮಾರ್ ಖುದ್ದಾಗಿ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.
ಭಾನುವಾರ ಮಧ್ಯಾಹ್ನ ಖಚಿತ ಮಾಹಿತಿ ಮೇರೆಗೆ ದಾಳಿದ ಮಾಡಿದ ಪೊಲೀಸರು, ಹಣದ ದಾಖಲೆಯನ್ನು ನರೇಶ್ನ ಬಳಿ ಕೇಳಿದ್ದಾರೆ. ಆಗ ದಾಖಲೆಗಳನ್ನು ಕೊಡಲು ವಿಫಲವಾಗಿದ್ದರೊಂದ ಪೊಲೀಸರು ಎಲ್ಲ ಹಣವನ್ನು ಹಾಗೂ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರು ಶೋಧ ಮಾಡಿದ ಮನೆಯಲ್ಲಿ 5.60 ಕೋಟಿ ರೂ. ಮೊತ್ತದ ನಗದು, 3 ಕೆ.ಜಿ. ಬಂಗಾರ, 103 ಕೆ.ಜಿ. ಆಭರಣ ಬೆಳ್ಳಿ ಹಾಗೂ 21 ಬೆಳ್ಳಿ ಗಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಪೊಲೀಸರು ಕೂಡ ದಾಳಿ ಮಾಡಿ ಕೋಟಿ ಕೋಟಿ ಹಣ ಜಪ್ತಿ ಮಾಡಿಕೊಂಡಿದ್ದಾರೆ. ಈ ಹಣವನ್ನು ನಗದು ರೂಪದಲ್ಲಿ ಇಟ್ಟುಕೊಂಡಿರುವುದಕ್ಕೆ ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಲು ಇಟ್ಟುಕೊಳ್ಳಲಾಗಿದೆಯೇ ಎಂದು ಅನುಮಾನ ವ್ಯಕ್ತಪಡಿಸಿ ಹಣ ವಶಕ್ಕೆ ಪಡೆದಿದ್ದಾರೆ.
ಇನ್ನು ಒಟ್ಟಾರೆ 7.6 ಕೋಟಿ ರೂ. ಮೌಲ್ಯದ ಹಣ, ಬಂಗಾರ ಹಾಗೂ ಬೆಳ್ಳಿ ಜಪ್ತಿ ಮಾಡಲಾಗಿದೆ. ಬ್ರೂಸ್ ಪೇಟೆ ಪೊಲೀಸರ ಕಾರ್ಯಚರಣೆಯಿಂದ ಹಣ ಸಿಕ್ಕಿದ್ದು, ಹವಾಲಕ್ಕೆ ಸಂಬಂಧಿಸಿದ ಹಣ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಪೊಲೀಸರು ಚಿನ್ನಾಭರಣ ವ್ಯಾಪಾರಿ ನರೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
ಇನ್ನು ಹಣ ಮತ್ತು ಬಂಗಾರ ಪತ್ತೆಯಾದ ವ್ಯಕ್ತಿ ನರೇಶ್ ಹೇಮಾ ಜುವೆಲರ್ಸ್ ಮಾಲಿಕನಾಗಿದ್ದಾನೆ. ಇನ್ನು ದಾಖಲೆಯಿಲ್ಲದ ಹಣ ಸಂಗ್ರಹಣೆ ಮಾಡಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ತಿಳಿಸಿದ್ದಾರೆ. ಆದರೆ, ಹಣ ಯಾವುದೇ ಪಕ್ಷಕ್ಕೆ ಸೇರಿದ್ದು ಅನ್ನೋ ಬಗ್ಗೆ ಸ್ಪಷ್ಟತೆ ಇಲ್ಲ. ಈ ಬಗ್ಗೆ ತನಿಖೆ ನಡೆಸಲಾಗ್ತಿದೆ. ಕೆಪಿ ಅ್ಯಕ್ಟ್ ನಲ್ಲಿ ದೂರು ದಾಖಲು ಮಾಡಲಾಗಿದೆ. ಹಣ ಮತ್ತು ಬಂಗಾರ ಅದಾಯ ತೆರೆಗೆ ಇಲಾಖೆಗೆ ರವಾನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗ್ತದೆ ಎಂದು ಮಾಹಿತಿ ನೀಡಿದರು.