ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಭೈರಸಂದ್ರದಲ್ಲಿ ಲೋಕಸಭಾ ಚುನಾವಣಾ
ಪ್ರಚಾರದಲ್ಲಿ ತೊಡಗಿದ್ದ ವೇಳೆ ವ್ಯಕ್ತಿಯೊಬ್ಬ ಸೊಂಟದಲ್ಲಿ ಗನ್ ಇಟ್ಟುಕೊಂಡು ಬಂದು ಹಾರ ಹಾಕಿದ ಘಟನೆ ನಡೆದಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಪ್ರಚಾರದ ವೇಳೆ ಗನ್ ಇಟ್ಟುಕೊಂಡು ಕ್ಯಾಂಟರ್ ಏರಿ ಸಿಎಂಗೆ ವ್ಯಕ್ತಿಯೊಬ್ಬ ಹಾರ ಹಾಕಿ ಅಲ್ಲಿಂದ ತೆರಳಿದ್ದಾನೆ. ಆತನ ಬಳಿ ಗನ್ ಇರುವುದನ್ನು ಪೊಲೀಸರು ಗಮನಿಸಿಲ್ಲ.
ಗನ್ ಇಟ್ಟುಕೊಂಡು ಸಿಎಂಗೆ ಹಾರ ಹಾಕಿದ ವ್ಯಕ್ತಿಯನ್ನು ರಿಯಾಜ್ ಎಂದು ಗುರುತಿಸಲಾಗಿದೆ. ಆತ ಸಿದ್ದಾಪುರದ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, 5 ವರ್ಷಗಳ ಹಿಂದೆ ರಿಯಾಜ್ ಮೇಲೆ ಕೊಲೆ ಯತ್ನವಾದ ಬಳಿಕ ಗನ್ ಪರವಾನಿಗೆ ಪಡೆದುಕೊಂಡಿದ್ದ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಆರ್.ವಿ ದೇವರಾಜ್, ರಿಯಾಜ್ ಕಾಂಗ್ರೆಸ್ನ ಕಾರ್ಯಕರ್ತ, ನಾಲ್ಕೈದು ವರ್ಷಗಳ ಹಿಂದೆ ಅವನ ಮೇಲೆ ಅಟ್ಯಾಕ್ ಆಗಿತ್ತು. ಇದರಿಂದ ಗನ್ ಲೈಸೆನ್ಸ್ ಪಡೆದುಕೊಂಡು, ಇಟ್ಟುಕೊಂಡಿದ್ದಾನೆ ಅನ್ಸುತ್ತೆ. ಅವನೇನು ರೌಡಿ ಅಲ್ಲ ಎಂದಿದ್ದಾರೆ.
ಸಿಎಂ ಬಳಿ ಗನ್ ತೆಗೆದುಕೊಂಡ ಹೋದ ವ್ಯಕ್ತಿ ಮೇಲೆ ಅನುಮಾನ ಮೂಡಿದ್ದು, ಚುನಾವಣಾ ಸಂದರ್ಭದಲ್ಲಿ ಗನ್ ಇಟ್ಟುಕೊಳ್ಳಲು ಅವಕಾಶ ಇಲ್ಲ. ತೀರಾ ಅವಶ್ಯಕತೆ ಇದ್ದರೆ ಮಾತ್ರ ಈ ಸಂದರ್ಭದಲ್ಲಿ ಗನ್ ಇಟ್ಟುಕೊಳ್ಳಲು ಅವಕಾಶವಿದೆ. ಕಮಿಷನರ್ ಅವರಿಂದ ಅನುಮತಿ ಸಿಕ್ಕರೆ ಮಾತ್ರ ಗನ್ ಇಟ್ಟುಕೊಳ್ಳಬಹುದು. ಬ್ಯಾಂಕ್ ಸಿಬ್ಬಂದಿ, ವಿಜ್ಞಾನಿಗಳು ತೀರಾ ಅವಶ್ಯಕತೆ ಇದ್ದವರಿಗೆ ಮಾತ್ರ ಗನ್ ಇಟ್ಟುಕೊಳ್ಳಲು ಅವಕಾಶವಿದೆ.
ಇದು ಪೊಲೀಸ್ ಭದ್ರತಾ ವೈಫಲ್ಯನಾ? ಲೈಸೆನ್ಸ್ ಹೊಂದಿದ ವ್ಯಕ್ತಿ ಆದ್ರೂ, ಸಿಎಂ ಬಳಿ ಗನ್ ಇಟ್ಟುಕೊಂಡು ಹೋಗಬಹುದಾ? ಗನ್ ತಂದಿದ್ದ ವ್ಯಕ್ತಿಯನ್ನ ಪೊಲೀಸರು ಯಾಕೆ ಪರಿಶೀಲನೆ ಮಾಡಲಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ.