ಬಳ್ಳಾರಿ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಏ.12 ರಂದು ಅಧಿಸೂಚನೆ ಪ್ರಕಟ
ಬಳ್ಳಾರಿ,ಏ.11 : 09 – ಬಳ್ಳಾರಿ (ಪ.ಪಂ) ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಮೇ 07 ರಂದು ನಡೆಯಲಿರುವ ಚುನಾವಣೆಗೆ ಏ.12 ರಂದು ಅಧಿಸೂಚನೆ ಪ್ರಕಟಗೊಳ್ಳಲಿದ್ದು ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದೆ, ಏ.19 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದರು.
ಇಂದು, ಜಿಲ್ಲಾಡಳಿತ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ 09-ಬಳ್ಳಾರಿ(ಪ.ಪಂ) ಲೋಕಸಭಾ ಕ್ಷೇತ್ರದ ಅಧಿಸೂಚನೆ ಪ್ರಕಟ ಸಂಬಂಧ ಕರೆದಿದ್ದ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಎರಡನೇ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ, ಇನ್ನುಳಿದ ದಿನಗಳಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 03 ಗಂಟೆಯವರೆಗೆ ಏ.19 ರ ವರೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದು. ಏ.20 ರಂದು ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏ.22 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದು ಹೇಳಿದರು.
ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಕ್ರಮಬದ್ಧ ನಾಮಪತ್ರ ಸಲ್ಲಿಸಬೇಕು, ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿಯ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ 144ರ ಸೆಕ್ಷನ್ ಕಾಯ್ದೆ ಜಾರಿ ಮಾಡಿದೆ. ನಾಮಪತ್ರ ಸಲ್ಲಿಸುವ ಉಮೇದುವಾರರೊಂದಿಗೆ 4 ಮಂದಿಗೆ ಮಾತ್ರ ಚುನಾವಣಾಧಿಕಾರಿಗಳ ಕಚೇರಿಗೆ ಬರಲು ಅನುಮತಿ ನೀಡಲಾಗಿದೆ. ಒಟ್ಟು 5 ಮಂದಿಗೆ ಮಾತ್ರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಇರಲು ಅವಕಾಶ ಕಲ್ಪಿಸಲಾಗಿದೆ ಎಂದರು.
ನಾಮಪತ್ರಗಳ ಪರಿಶೀಲನೆ ನಂತರ ಏ.20 ರಂದು ನಾಮಪತ್ರ ವಾಪಸ್ಸಾತಿ ಕಾಲಾವಕಾಶ ಮುಗಿದ ನಂತರ ಅಂತಿಮವಾಗಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳನ್ನು ಪ್ರಕಟಿಸಲಾಗುವುದು. ಮೇ 07 ರಂದು ಮತದಾನ ನಡೆಯಲಿದ್ದು, ಜೂ.4 ರಂದು ಮತ ಎಣಿಕೆ ನಡೆಯಲಿದೆ. ಜೂ.6 ರಂದು ಚುನಾವಣೆ ಪ್ರಕ್ರಿಯೆ ಸಂಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಬಳ್ಳಾರಿ ಲೋಕಸಭೆ ಸಾರ್ವತ್ರಿಕ ಚುನಾವಣೆ;
ಅಖಂಡ ಜಿಲ್ಲೆಯಲ್ಲಿ ಒಟ್ಟು 18,77,751 ಮತದಾರರು, 1972 ಮತಗಟ್ಟೆ ಸ್ಥಾಪನೆ:
09 – ಬಳ್ಳಾರಿ (ಪ.ಪಂ) ಲೋಕಸಭೆ ಮೀಸಲು ಕ್ಷೇತ್ರದಲ್ಲಿ 2024 ರ ಏಪ್ರಿಲ್ 04 ರ ಮತದಾರರ ಪಟ್ಟಿಯನ್ವಯ ಒಟ್ಟು 18,77,751 ಮತದಾರರಿದ್ದಾರೆ. ಒಟ್ಟು 1972 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಅಖಂಡ ಬಳ್ಳಾರಿ ಲೋಕಸಭಾ ಕ್ಷೇತ್ರ:
09-ಬಳ್ಳಾರಿ (ಪ.ಪಂ) ಲೋಕಸಭಾ ಕ್ಷೇತ್ರವು ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ವಿಜಯನಗರ, ಕಂಪ್ಲಿ, ಬಳ್ಳಾರಿ ಗ್ರಾಮೀಣ, ಬಳ್ಳಾರಿ ನಗರ, ಸಂಡೂರು ಹಾಗೂ ಕೂಡ್ಲಿಗಿ ಸೇರಿದಂತೆ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರವು ಮಾತ್ರ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದೆ.
ಅಖಂಡ (ವಿಜಯನಗರ ಜಿಲ್ಲೆ ಸೇರಿ) ಜಿಲ್ಲೆಯಲ್ಲಿ 9,51,522 ಮಹಿಳಾ ಮತದಾರರೇ ಹೆಚ್ಚಿದ್ದು, 9,25,961 ಪುರುಷ ಮತದಾರರು ಹಾಗೂ 268 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ. ಇದರಲ್ಲಿ 53,169 ಯುವ ಮತದಾರರು, 24,841 ವಿಶೇಷಚೇತನ ಮತದಾರರು ಮತ್ತು 13,285 ಜನ 85 ವರ್ಷ ಮೇಲ್ಪಟ್ಟ ವಯಸ್ಕ ಮತದಾರರಿದ್ದಾರೆ ಎಂದು ಹೇಳಿದ್ದಾರೆ.
ಬಳ್ಳಾರಿ ಜಿಲ್ಲೆ ಕ್ಷೇತ್ರವಾರು ಮತದಾರರ ವಿವರ:
ಕಂಪ್ಲಿ ಕ್ಷೇತ್ರ:
91-ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ 1,10,119 ಪುರುಷ ಮತದಾರರು, 1,13,006 ಮಹಿಳಾ ಮತದಾರರು ಹಾಗೂ 35 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿ ಒಟ್ಟು 2,23,160 ಮತದಾರರಿದ್ದಾರೆ. ಅದರಲ್ಲಿ 7011 ಯುವ ಮತದಾರರು, 1158 ಜನ 85 ವರ್ಷ ಮೇಲ್ಪಟ್ಟ ವಯಸ್ಕ ಮತದಾರರು, 4,317 ವಿಶೇಷ ಚೇತನ ಮತದಾರರು ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 242 ಮತಗಟ್ಟೆಗಳಿವೆ.
ಬಳ್ಳಾರಿ ಗ್ರಾಮೀಣ ಕ್ಷೇತ್ರ:
93-ಬಳ್ಳಾರಿ ಗ್ರಾಮೀಣ ವಿಧಾನಸಭಾ ಕೇತ್ರದಲ್ಲಿ 1,20,964 ಪುರುಷ ಮತದಾರರು, 1,28,388 ಮಹಿಳೆ ಮತದಾರರು ಹಾಗೂ 51 ಜನ ಇತರೆ ಮತದಾರರಿದ್ದು, ಒಟ್ಟು 2,49,403 ಮತದಾರರಿದ್ದಾರೆ. ಅದರಲ್ಲಿ 7,907 ಯುವ ಮತದಾರರು, 1,720 ಜನ 80 ವರ್ಷ ಮೇಲ್ಪಟ್ಟ ವಯಸ್ಕ ಮತದಾರರು, 2,995 ವಿಶೇಷಚೇತನ ಮತದಾರರು ಮತದಾರಿದ್ದಾರೆ. ಇಲ್ಲಿ ಒಟ್ಟು 235 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಬಳ್ಳಾರಿ ನಗರ ಕ್ಷೇತ್ರ:
94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 1,31,405 ಪುರುಷ ಮತದಾರರು, 1,40,211 ಮಹಿಳೆ ಮತದಾರರು ಮತ್ತು 34 ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಸೇರಿ ಒಟ್ಟು 2,71,650 ಮತದಾರರಿದ್ದಾರೆ. ಅದರಲ್ಲಿ 7924 ಯುವ ಮತದಾರರು, 2420 ಜನ 80 ವರ್ಷ ಮೇಲ್ಪಟ್ಟ ವಯಸ್ಕ ಮತದಾರರು, 1530 ವಿಶೇಷ ಚೇತನ ಮತದಾರರಿದ್ದಾರೆ. ನಗರದಲ್ಲಿ ಒಟ್ಟು 261 ಮತಗಟ್ಟೆಗಳಿವೆ.
ಸಂಡೂರು ಕ್ಷೇತ್ರ:
95-ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ 1,15,638 ಪುರುಷ ಮತದಾರರು, 1,15,977 ಮಹಿಳೆ ಮತದಾರರು ಮತ್ತು ಇತರೆ 25 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಒಳಗೊಂಡು ಒಟ್ಟು 2,31,640 ಮತದಾರರಿದ್ದಾರೆ. ಈ ಪೈಕಿ 7,355 ಯುವ ಮತದಾರರು, 1,355 ಜನ ವಯಸ್ಕ ಮತದಾರರು, 2,742 ವಿಶೇಷಚೇತನ ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 253 ಮತಗಟ್ಟೆಗಳಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಸೇರಿದಂತೆ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.